ಪೋಕ್ಸೋ: ಜೀವಪರ್ಯಂತ ಶಿಕ್ಷೆಗೊಳಗಾದ ಆರೋಪಿಗೆ ಇನ್ನೊಂದು ಪ್ರಕರಣದಲ್ಲಿ 46 ವರ್ಷ ಸಜೆ

ಕಾಸರಗೋಡು: ಪೋಕ್ಸೋ ಪ್ರಕರಣವೊಂದರಲ್ಲಿ ಜೀವಪರ್ಯಂತ ಶಿಕ್ಷೆಗೊಳಗಾದ ಆರೋಪಿಗೆ ಅದೇ ರೀತಿಯ ಇನ್ನೊಂದು ಪೋಕ್ಸೋ ಪ್ರಕರಣದಲ್ಲಿ  ನ್ಯಾಯಾಲಯ ೪೬ ವರ್ಷಗಳ ಕಠಿಣ ಸಜೆ ಹಾಗೂ 62,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

ಹೊಸದುರ್ಗ ಪೂಜಾಂವಿ ನಿವಾಸಿ ಪಿ.ಎ. ಸಲೀಂ (37) ಎಂಬಾತನಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾ ಧೀಶರಾದ ಪಿ.ಎಂ. ಸುರೇಶ್ ಅವರು ವಿವಿಧ ಸೆಕ್ಷನ್‌ಗಳಲ್ಲಾಗಿ ಈ ಶಿಕ್ಷೆ ವಿಧಿಸಿದ್ದಾರೆ.

ಈತ ಮೂಲತಃ ಕೊಡಗು ನಾಪೊಕ್ಲು ನಿವಾಸಿಯಾಗಿದ್ದಾನೆ. ಜುಲ್ಮಾನೆ ಪಾವತಿಸಿದಲ್ಲಿ ಆರೋಪಿ 1 ವರ್ಷ 2 ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಪೋಕ್ಸೋ ಆಕ್ಟ್ ಪ್ರಕಾರ ಆರೋಪಿಗೆ 30 ವರ್ಷ ಕಠಿಣ ಸಜೆ ಮತ್ತು 5೦,೦೦೦ ರೂ. ಜುಲ್ಮಾನೆ, ಐಪಿಸಿ 370(4) ಸೆಕ್ಷನ್ ಪ್ರಕಾರ 10 ವರ್ಷ ಕಠಿಣ ಸಜೆ ಮತ್ತು 1೦,೦೦೦ರೂ. ಜುಲ್ಮಾನೆ, ಐಪಿಸಿ 354 (ಎ)(ಬಿ) ಸೆಕ್ಷನ್ ಪ್ರಕಾರ 3 ವರ್ಷ ಕಠಿಣ ಸಜೆ ಮತ್ತು 1,೦೦೦ ರೂ. ಜುಲ್ಮಾನೆ ಹಾಗೂ ಐಪಿಸಿ 354(ಬಿ) ಸೆಕ್ಷನ್ ಪ್ರಕಾರ ೩ ವರ್ಷ ಸಜೆ ಹಾಗೂ 1,೦೦೦ ರೂ. ಜುಲ್ಮಾನೆ ವಿಧಿಸಲಾಗಿದೆ.

2022 ಜೂನ್ 2ರಂದು ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ 14ರ ಹರೆಯದ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವುದಾಗಿ ನಂಬಿಸಿ ಆಕೆಯನ್ನು ಬೈಕ್‌ನಲ್ಲಿ ಕರೆದೊಯ್ದು ದಾರಿ ಮಧ್ಯೆ ಮಂಗನನ್ನು ತೋರಿಸಿ ಕೊಡುವುದಾಗಿ ತಿಳಿಸಿ ಆಕೆಯನ್ನು ಆದೂರು ಬಳಿಯ ಕಾಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದನು. ಅದಾದ ಗಂಟೆಗಳ ಬಳಿಕ ಆಕೆಯನ್ನು ಇನ್ನೊಂದು ಕಾಡಿಗೆ ಒಯ್ದು ಅಲ್ಲೂ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಆರೋಪಿ ಸಲೀಂನ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಹಾಗೂ ಇತರ ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿದ್ದರು. ಅಂದು ಮೇಲ್ಪರಂಬ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ಕೆ. ದಾಮೋದರನ್ ಮೊದಲು ಈ ಪ್ರಕರಣದ ತನಿಖೆ ನಡೆಸಿದ್ದರು. ನಂತರ ಡಿವೈಎಸ್‌ಪಿ ಉತ್ತಮ್‌ದಾಸ್‌ರ ಪ್ರಕರಣದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಷನ್ ಪರ ಸ್ಪೆಷಲ್ ಪ್ರೋಸಿಕ್ಯೂಟರ್ ನ್ಯಾಯವಾದಿ ಎಂ. ಗಂಗಾಧರನ್ ನ್ಯಾಯಾಲಯದಲ್ಲಿ ವಾದಿಸಿದ್ದರು.

ಇದೇ ರೀತಿ 2024 ಮೇ 15ರಂದು ಮುಂಜಾನೆ ಹೊಸದುರ್ಗ ಪರಿಸರದ 9ರ ಹರೆಯದ ಬಾಲಕಿ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಆ ಮನೆಗೆ ನುಗ್ಗಿ ಆಕೆಯನ್ನು ಎತ್ತಿಕೊಂಡು ಅಲ್ಲೇ ಪಕ್ಕದ ತೋಟವೊಂದಕ್ಕೆ ಕೊಂಡೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲೂ ಸಲೀಂ ಆರೋಪಿ ಯಾಗಿದ್ದು, ಈ ಪ್ರಕರಣದಲ್ಲಿ ಆತನಿಗೆ ನ್ಯಾಯಾಲಯ ಜೀವಪರ್ಯಂತ ಶಿಕ್ಷೆ ವಿಧಿಸಿತ್ತು. ಬಳಿಕ ಆತನನ್ನು ಕಣ್ಣೂರು ಜೈಲಿನಲ್ಲಿ ಕೂಡಿಹಾಕಲಾಗಿತ್ತು. ಅದಾದ ಬೆನ್ನಲ್ಲೇ ಆತನಿಗೆ ಅದೇ ರೀತಿಯ ಹೊಸದುರ್ಗ ಪರಿಸರದ 14ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನ್ಯಾಯಾಲಯ  46 ವರ್ಷ ಕಠಿಣ ಸಜೆ ವಿಧಿಸಿದೆ.

RELATED NEWS

You cannot copy contents of this page