ಕಾಸರಗೋಡು: ಚಂದೇರ ಪೊಲೀಸ್ ಠಾಣೆಯಲ್ಲಿ ಇರಿಸಿದ್ದ ಮೊಬೈಲ್ ಫೋನ್ ಕಳವುಗೈದ ಪ್ರಕರಣದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ನನ್ನು ಬಂಧಿಸಲಾಗಿದೆ. ಬದಿಯಡ್ಕ ನೀರ್ಚಾಲು ನಿವಾಸಿಯಾದ ವೈ. ಬೈಜು (41) ಎಂಬಾತನನ್ನು ಚಂದೇರ ಪೊಲೀಸರು ಬಂಧಿಸಿದ್ದು, ಈತನಿಗೆ ಹೊಸದುರ್ಗ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಬೈಜುನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖಾ ವಿಧೇಯವಾಗಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಬಿದ್ದು ಸಿಕ್ಕಿದ 1೦,೦೦೦ ರೂ. ಮೌಲ್ಯದ ಮೊಬೈಲ್ ಫೋನನ್ನು ಪೊಲೀಸ್ ಠಾಣೆಯಲ್ಲಿರಿಸಲಾಗಿತ್ತು. ಒಂದು ವಾರದ ನಂತರ ಅದರ ವಾರಸುದಾರ ತಲುಪಿದ್ದು, ಈ ವೇಳೆ ಆತನಿಗೆ ಮೊಬೈಲ್ ಫೋನ್ ನೀಡಲು ನೋಡಿದಾಗ ಅದು ಕಾಣೆಯಾಗಿರುವುದು ಅರಿವಿಗೆ ಬಂದಿತ್ತು. ರಾತ್ರಿ ಕರ್ತವ್ಯದಲ್ಲಿದ್ದ ಬೈಜು ಅದನ್ನು ಈ ತಿಂಗಳ ೧೬ರಂದು ಕಳವುಗೈದು ಬದಿಯಡ್ಕದ ಓರ್ವನಿಗೆ ಮಾರಾಟಮಾಡಿದ್ದನು. ಐಎಂಎಐ ನಂಬ್ರದ ಆಧಾರದಲ್ಲಿ ನಡೆಸಿದ ತನಿಖೆ ವೇಳೆ ಫೋನ್ ಓರ್ವ ಉಪಯೋಗಿ ಸುತ್ತಿರುವುದು ತಿಳಿದು ಬಂದಿತ್ತು. ಆತನನ್ನು ಠಾಣೆಗೆ ಕರೆಸಿ ತನಿಖೆಗೊಳ ಪಡಿಸಿದಾಗ ತನಗೆ ಈ ಮೊಬೈಲ್ ಫೋನ್ ಮಾರಾಟಗೈದಿರುವುದು ಬೈಜು ಆಗಿದ್ದಾನೆಂದು ಆತ ತಿಳಿಸಿದ್ದನು. ಇದರಿಂದ ಬೈಜು ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಠಾಣೆಯಿಂದ ಸ್ವತಃ ಪೊಲೀಸನೇ ಮೊಬೈಲ್ ಫೋನ್ ಕಳವುಗೈದ ಘಟನೆ ಪೊಲೀಸ್ ಸೇನೆಗೆ ನಾಚಿಕೆಗೇಡಿನ ಸಂಗತಿಯಾಗಿದೆ.






