ಕಾಸರಗೋಡು: ತಾಯಿಯೊಂದಿಗೆ ಮುನಿಸುಗೊಂಡು ರೈಲಿನಡಿಗೆ ಹಾರಿ ಆತ್ಮಹತ್ಯೆಗೆತ್ನಿಸಿದ 27ರ ಹರೆಯದ ಯುವತಿಯನ್ನು ಮೇಲ್ಪರಂಬ ಪೊಲೀಸರು ನಡೆಸಿದ ಸಕಾಲಿ ಕಾರ್ಯಾಚರಣೆಯಲ್ಲಿ ರಕ್ಷಿಸಿದ ಘಟನೆ ನಡೆದಿದೆ.
ಕಳನಾಡು ಗ್ರಾಮ ನಿವಾಸಿ ಹಾಗೂ ಇಬ್ಬರು ಪುಟ್ಟ ಮಕ್ಕಳ ತಾಯಿಯಾಗಿರುವ ಯುವತಿ ನಿನ್ನೆ ತಾಯಿಯೊಂದಿಗೆ ಮುನಿಸುಗೊಂಡು ಆತ್ಮಹತ್ಯೆಗೈಯ್ಯಲು ಮನೆ ಬಿಟ್ಟಿದ್ದಳು. ಆ ಕೂಡಲೇ ಆಕೆಯ ತಾಯಿ ಮೇಲ್ಪರಂಬ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಇನ್‌ಸ್ಪೆಕ್ಟರ್ ಎಸ್.ಪಿ ರಾಘವನ್ ನೀಡಿದ ನಿರ್ದೇಶ ಪ್ರಕಾರ ಎಸ್‌ಐ ಪಿ.ಕೆ. ಅನೀಶ್‌ರನ್ನೊಳಗೊಂಡ ಪೊಲೀಸರ ತಂಡ ಯುವತಿಯನ್ನು ಆಕೆಯ ಮೊಬೈಲ್ ಫೋನ್ ಮೂಲಕ ಸಂಪರ್ಕಿಸಿದಾಗ ಆಕೆ ಅಳತೊಡಗಿದಳು. ಮಾತ್ರವಲ್ಲ ತಕ್ಷಣ ಫೋನ್ ಸಂಪರ್ಕ ಕಟ್ ಮಾಡಿದಳು. ಇದರಿಂದಾಗಿ ಆಕೆ ಇರುವ ಸ್ಥಳವನ್ನು ಖಾತರಿಪಡಿಸಲು ಸೈಬರ್ ಪೊಲೀಸರನ್ನು ಸಂಪರ್ಕಿಸಿ ಲೊಕೇಶನ್ ಗುರುತಿಸಿ ಆಕೆ ಚಾತಂಗೈಯಲ್ಲಿರುವುದಾಗಿ ದೃಢೀಕರಿಸಿ ಅಲ್ಲಿಗೆ ಸಾಗಿ ರೈಲು ಹಳಿ ಬಳಿಯ ಪೊದೆಯಲ್ಲಿ ಅವಿತುಕೊಂಡಿದ್ದ ಯುವತಿಯನ್ನು ವಶಕ್ಕೆ ತೆಗೆದುಕೊಂಡು ಆಕೆಯ ಪ್ರಾಣ ರಕ್ಷಿಸಿದರು. ರೈಲು ಬರುವ ತನಕ ಪೊದೆಯಲ್ಲಿ ಅಡಗಿ ನಿಂತು ರೈಲಿನಡಿಗೆ ಹಾರಿ ಆತ್ಮಹತ್ಯೆಗೈಯ್ಯಲು ಯತ್ನಿಸಿದ್ದ ಯುವತಿಯನ್ನು ಕೊನೆಗೂ ಪೊಲೀಸರು ಪತ್ತೆಹಚ್ಚಿ ರಕ್ಷಿಸಿದರು.







