ಕಾಸರಗೋಡು: ಪ್ರಯಾಣ ವೇಳೆ ಕಾಣೆಯಾದ ದಾಖಲೆಪತ್ರಗಳು ಹಾಗೂ ಹಣ ಮರಳಿ ಲಭಿಸುವುದರೊಂದಿಗೆ ಮಾನ್ಯದ ಆಟೋಚಾಲಕ ಅಬ್ದುಲ್ ಮನಾಫ್‌ರ ಆತಂಕ ದೂರವಾಯಿತು. ಕಾಣೆಯಾದ ದಾಖಲೆ ಪತ್ರಗಳು ಲಭಿಸದಿದ್ದಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಆಲೋಚಿಸುತ್ತಿರುವಾ ಗಲೇ ಮೇಲ್ಪರಂಬ ಪೊಲೀಸ್ ಇನ್ಸ್‌ಪೆಕ್ಟರ್ ಎ. ಸಂತೋಷ್ ಕುಮಾರ್‌ರ ಫೋನ್ ಕರೆ ಮನಾಫ್‌ಗೆ ಲಭಿಸಿದೆ. ನಿಮ್ಮದೆಂದು ಸಂಶಯಿಸುವ ಒಂದು ಪರ್ಸ್ ಬಿದ್ದು ಸಿಕ್ಕಿದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದರು. ಕೂಡಲೇ ಅಬ್ದುಲ್ ಮನಾಫ್ ಮೇಲ್ಪರಂಬ ಪೊಲೀಸ್ ಠಾಣೆಗೆ ತಲುಪಿ ಪುರಾವೆ ಗಳನ್ನು ತಿಳಿಸಿದರು. ಬಳಿಕ ಪರ್ಸ್‌ನಲ್ಲಿದ್ದ 10,000 ರೂ., ಪಾನ್‌ಕಾರ್ಡ್, ಆರ್‌ಸಿ ಸಹಿತ ದಾಖಲೆ ಪತ್ರಗಳನ್ನು ಪೊಲೀಸರು ಹಸ್ತಾಂತರಿಸಿದರು.
ಸೋಮವಾರ ಚಟ್ಟಂಚಾಲ್ ಮೂಲಕ ಅಬ್ದುಲ್ ಮನಾಫ್‌ರ ಆಟೋರಿಕ್ಷಾ ಬಾಡಿಗೆಗಾಗಿ ತೆರಳಿತ್ತು. ಈ ವೇಳೆ ಅವರ ಪರ್ಸ್ ರಸ್ತೆಗೆಸೆಯಲ್ಪಟ್ಟಿತ್ತು. ಅವರ ಹಿಂದೆ ಪ್ರಯಾಣಿಸಿದ ಆದೂರು ಪೊಲೀಸ್ ಠಾಣೆಯ ಸಿಪಿಒ ಆಗಿರುವ ಬಂದಡ್ಕದ ಮಧು ಎಂಬವರಿಗೆ ಆ ಪರ್ಸ್ ಲಭಿಸಿತ್ತು. ಕುಟುಂಬ ಸಮೇತ ಮಧೂರಿಗೆ ತೆರಳಿ ಮರಳುತ್ತಿದ್ದಾಗ ಅವರಿಗೆ ಪರ್ಸ್ ಬಿದ್ದು ಸಿಕ್ಕಿದ್ದು, ಅದನ್ನು ಅವರು ಮೇಲ್ಪರಂಬ ಪೊಲೀಸ್ ಠಾಣೆಗೆ ತಲುಪಿಸಿ ಪ್ರಯಾಣ ಮುಂದುವರಿಸಿದ್ದರು. ಪರ್ಸ್‌ನಲ್ಲಿದ್ದ ಆರ್‌ಸಿಯಲ್ಲಿ ಮನಾಫ್‌ರ ಫೋನ್ ನಂಬ್ರ ಲಭಿಸಿದೆ. ಇದರಂತೆ ಅಬ್ದುಲ್ ಮನಾಫ್‌ರನ್ನು ಸಂಪರ್ಕಿಸಿ ಹಣ ಹಾಗೂ ದಾಖಲೆ ಪತ್ರಗಳನ್ನು ಮರಳಿಸಲು ಸಾಧ್ಯವಾಯಿತು. ಬಿದ್ದು ಸಿಕ್ಕಿದ ಪರ್ಸನ್ನು ಪೊಲೀಸ್ ಠಾಣೆಗೆ ತಲುಪಿಸಿದ ಮಧು ಹಾಗೂ ಮೇಲ್ಪರಂಬ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿ ಮನಾಫ್ ಠಾಣೆಯಿಂದ ಮರಳಿದರು.