ಬಡ ಕುಟುಂಬದ ಶೋಚನೀಯ ಸ್ಥಿತಿಯಲ್ಲಿದ್ದ ಮನೆ ಧರಾಶಾಯಿ: ನೂತನ ಮನೆ ಮಂಜೂರು ಮಾಡುವಂತೆ ಒತ್ತಾಯ

ಪೆರ್ಲ: ಬಡ ಕುಟುಂಬವೊಂದು ವಾಸಿಸುತ್ತಿದ್ದ ಮನೆ ಇತ್ತೀಚೆಗೆ ಕುಸಿದು ಬಿದ್ದಿದ್ದು ಇದರಿಂದ ಕುಟುಂಬಕ್ಕೆ ವಾಸಿಸಲು ಸೌಕರ್ಯವಿಲ್ಲದೆ ಸಂಕಷ್ಟ ಎದುರಿಸುತ್ತಿದೆ. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಕಜಂಪಾಡಿ ಸೆಟ್ಟಿಬೈಲ್ ಎಂಬಲ್ಲಿನ ಐತ್ತೆ ಎಂಬವರ ಹೆಂಚು ಹಾಸಿದ ಮನೆ ಕುಸಿದು ಬಿದ್ದಿದೆ. ಮನೆ ಕುಸಿಯುವ ಶಬ್ದ ಕೇಳಿ ಕುಟುಂಬ ಹೊರಗೆ ಓಡಿದುದರಿಂದ ಭಾರೀ ಅಪಾಯದಿಂದ ಪಾರಾಗಿದ್ದಾರೆ.

ಹೆಂಚು ಹಾಸಿದ ಮನೆಯ ಛಾವಣಿ ಶಿಥಿಲಗೊಂಡು ನೀರು ಒಳಗೆ ಸೋರುತ್ತಿತ್ತು. ಇದರಿಂದ ಟರ್ಪಾಲು ಹೊದಿಸಿ ನೀರು ಒಳಗೆ ಬೀಳದಂತೆ ತಡೆಯಲಾಗಿತ್ತು. ಆದರೂ ಮನೆ ಕುಸಿದು ಬಿದ್ದಿದೆ. ಪರಿಶಿಷ್ಟ ಜಾತಿ ಸಮುದಾಯದ ಐತ್ತೆ ಅವರ ಮನೆ ಶೋಚನೀಯಾವಸ್ಥೆಯಲ್ಲಿರುವುದರಿಂದ ಈ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಿಕೊಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಕ್ರಮ ಉಂಟಾಗಿಲ್ಲ. ಈ ಮನೆಯಲ್ಲಿ ಐತ್ತೆ, ಪುತ್ರಿ ಸುಮಲತಾ ಹಾಗೂ ಮೊಮ್ಮಗಳು ವಾಸಿಸುತ್ತಿದ್ದಾರೆ.

ಇದೀಗ ಹಗಲು ಹೊತ್ತಿನಲ್ಲಿ ತಾತ್ಕಾಲಿಕ ಶೆಡ್‌ನಲ್ಲಿ ವಾಸಿಸುವ ಇವರು ರಾತ್ರಿ ವೇಳೆ ಸಂಬಂಧಿಕರ ಮನೆಯಲ್ಲಿ ಆಶ್ರಯಿಸಬೇಕಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ಮಳೆಗಾಲ ದಲ್ಲಿ ಈ ಕುಟುಂಬದ ಸ್ಥಿತಿ ಇನ್ನಷ್ಟು ಶೋಚನೀಯವಾಗಲಿದೆ ಎಂದು ಆತಂಕ ಪಡಲಾಗಿದೆ. ಪರಿಶಿಷ್ಟ ಜಾತಿ- ವರ್ಗದ ಅಭಿವೃದ್ಧಿಗಾಗಿ ಸರಕಾರ ಹಲವು ಯೋಜನೆಗಳನ್ನು ಜ್ಯಾರಿಗೊಳಿಸುತ್ತಿದ್ದರೂ ಅರ್ಹರಿಗೆ ಅದರ ಪ್ರಯೋಜನ ಲಭಿ ಸುತ್ತಿಲ್ಲ ಎಂಬುವುದಕ್ಕೆ ಈ ಕುಟುಂಬ ಉದಾಹರಣೆಯಾಗಿದೆ ಎಂದು ನಾಗರಿಕರು ತಿಳಿಸುತ್ತಿದ್ದಾರೆ. ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ತ್ರಿಸ್ತರ ಪಂಚಾ ಯತ್ ಜನಪ್ರತಿನಿಧಿಗಳು ಶೀಘ್ರ ಐತ್ತೆಯವರ ಮನೆಯನ್ನು ಸಂಪರ್ಕಿಸಿ ಕುಟುಂಬದ ಸಂಕಷ್ಟಗಳನ್ನು ಆಲಿಸಿ ಅವರಿ ಗೊಂದು ಮನೆ ಮಂಜೂರು ಮಾಡಿ ಕೊಡಬೇಕೆಂಬ ಬೇಡಿಕೆ ತೀವ್ರಗೊಂಡಿದೆ.

You cannot copy contents of this page