ನೆಲ್ಲಿಕುಂಜೆ ಕಡಪ್ಪುರ-ಚೀರುಂಬಾ ರಸ್ತೆಯಲ್ಲಿ ಹೊಂಡಗಳು: ಜನಸಂಚಾರಕ್ಕೆ ಸಂಕಷ್ಟ; ದುರಸ್ತಿಗೆ ಹಣ ಮಂಜೂರಾದರೂ ಕಾಮಗಾರಿ ಆರಂಭಗೊಂಡಿಲ್ಲ

ಕಾಸರಗೋಡು: ನೆಲ್ಲಿಕುಂಜೆ ಕಡಪ್ಪುರ  ಫಿರ್ದೋಸ್ ನಗರ ಜಂಕ್ಷನ್‌ನಿಂದ ಚೀರುಂಬಾ ರಸ್ತೆ ಹೊಂಡಗಳಿಂದ ತುಂಬಿಕೊಂಡು ಶೋಚನೀಯಾವಸ್ಥೆಯಲ್ಲಿದ್ದು ಜನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

ರಸ್ತೆಯಲ್ಲಿ  ಬೃಹತ್ ಹೊಂಡ ಗಳು ಸೃಷ್ಟಿಯಾಗಿದ್ದು, ಅದರಲ್ಲಿ ಮಳೆ ನೀರು ತುಂಬಿಕೊಳ್ಳುತ್ತಿದೆ. ಇದರಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗುತ್ತಿದೆ.

ಹೊಂಡಗಳಿಂದಾಗಿ ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ಪ್ರಯಾಣಿ ಕರು ಗಾಯಗೊಳ್ಳುವ ಘಟನೆ ಪದೇ ಪದೇ ಸಂಭವಿಸುತ್ತಿದೆ.

ನಗರಸಭಾ ಚೆಯರ್‌ಮೆನ್ ಪ್ರತಿನಿಧೀಕರಿಸುವ ವಾರ್ಡ್‌ನಲ್ಲಿ ಈ ರಸ್ತೆಯಿದ್ದರೂ ದುರಸ್ತಿಗೆ ಕ್ರಮ ಉಂಟಾಗಿಲ್ಲವೆಂದು ನಾಗರಿಕರು ದೂರುತ್ತಿದ್ದಾರೆ. ಗ್ರಾಮೀಣ ಮಿಷನ್ ಯೋಜನೆಯಲ್ಲಿ ಈ ರಸ್ತೆ ಒಳಗೊಂಡಿದೆ.  ರಸ್ತೆಯ ದುರಸ್ತಿಗಾಗಿ 45 ಲಕ್ಷ ರೂಪಾಯಿ ಮಂಜೂರು ಗೊಂಡಿದೆ ಎಂದು ತಿಳಿದುಬಂದಿದೆ. ಆದರೆ ಇದುವರೆಗೆ ದುರಸ್ತಿಗೆ  ಕ್ರಮ ಉಂಟಾಗಿಲ್ಲವೆಂದೂ ನಾಗರಿಕರು ತಿಳಿಸುತ್ತಿದ್ದಾರೆ. ಈ ಭಾಗದಿಂದ ಹಲವು ಮಕ್ಕಳು ಶಾಲೆಗೆ ನಡೆದುಹೋಗುತ್ತಿದ್ದಾರೆ. ರಸ್ತೆಯ ಶೋಚನೀಯಾವಸ್ಥೆಯಿಂದ ನಡೆದಾಡಲು ಕೂಡಾ ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ವಾಹನಗಳು ಸಂಚರಿಸುವ ವೇಳೆ ಕೆಸರು ನೀರು ಪಾದಚಾರಿಗಳ ಮೇಲೆ ಎರಚಲ್ಪಡುತ್ತಿದೆ.  ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಸಮೀಪ ರಸ್ತೆಯಲ್ಲಿ ಭಾರೀ ಆಳದ ಹೊಂಡ ಸೃಷ್ಟಿಯಾಗಿದೆ.

ರಸ್ತೆಯ ಬದಿಯಲ್ಲಿ ಕುಡಿಯುವ  ನೀರಿನ ಪೈಪು ಅಳವಡಿಸಲು ಹೊಂಡ ತೋಡಿ ಅರ್ಧಭಾಗ ಕಾಂಕ್ರೀಟ್ ನಡೆಸಿ ಮುಚ್ಚಲಾಗಿದೆ. ಬಾಕಿ  ಉಳಿದ ಭಾಗದಲ್ಲಿ ವಾಹನಗಳು ಸಂಚರಿಸುವ ವೇಳ ಚಕ್ರಗಳು ಅದರಲ್ಲಿ ಸಿಲುಕುತ್ತಿದೆ. ರಸ್ತೆಯಲ್ಲಿ ಸಂಚಾರಕ್ಕೆ ಸಾಧ್ಯವಾಗದಂತಹ ಸ್ಥಿತಿ ಸೃಷ್ಟಯಾಗಿರುವಾಗಲೂ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಇದೇ ಸ್ಥಿತಿ ಮುಂದುವರಿದರೆ ಶೀಘ್ರ ಚಳವಳಿನಡೆಸಬೇಕಾಗಿ ಬರಲಿದೆ ಯೆಂದು ನಾಗರಿಕರು ತಿಳಿಸಿದ್ದಾರೆ.

You cannot copy contents of this page