ಕಾಸರಗೋಡು: ನಗರದ ಹಳೇ ಬಸ್ ನಿಲ್ದಾಣ ಪರಿಸರದಲ್ಲಿರುವ ಮಾರ್ಕೆಟ್ ರಸ್ತೆಗೆ ವಿದ್ಯುತ್ ತಂತಿ ಕಡಿದು ರಸ್ತೆಗೆ ಬಿದ್ದು ಸಂಭಾವ್ಯ ಬಾರಿ ದೊಡ್ಡ ಅನಾಹುತ ತಪ್ಪಿಹೋಗಿದೆ. ಪಾರ್ಸೆಲ್ ಲಾರಿಯೊಂದು ಈ ರಸ್ತೆ ಮೂಲಕ ಹಾದು ಹೋಗುತ್ತಿದ್ದ ವೇಳೆ ಅದರ ಮೇಲ್ಭಾಗ ರಸ್ತೆ ಮೇಲ್ಗಡೆ ಬಾಗಿದ ಸ್ಥಿತಿಯಲ್ಲಿದ್ದ ವಿದ್ಯುತ್ ಸರ್ವಿಸ್ ತಂತಿ ತಗಲಿ ಅದು ತುಂಡಾಗಿ ರಸ್ತೆಗೆ ಬಿದ್ದಿದೆ. ಬೆಳಗ್ಗಿನ ಸಮಯವಾದುದರಿಂದಾಗಿ ಹೆಚ್ಚಿನ ಅನಾಹುತ ಅದೃಷ್ಟವಶಾತ್ ತಪ್ಪಿಹೋಗಿದೆ. ತಕ್ಷಣ ವಿದ್ಯುತ್ ಇಲಾಖೆಯವರನ್ನು ಕರೆದು ಮಾಹಿತಿ ನೀಡಲಾಯಿತಾದರೂ, ಅವರು ಸಕಾಲದಲ್ಲಿ ಆಗಮಿಸದೇ ಇರುವುದರಿಂದಾಗಿ ನಂತರ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಲಾಯಿತು. ಆದರಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್ರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕೆ ಆಗಮಿಸಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಎತ್ತಿ ಬದಿಗೆ ಸರಿಸಿದರು. ಆ ವೇಳೆ ವಿದ್ಯುನ್ಮಂಡಳಿಯವರೂ ಸ್ಥಳಕ್ಕೆ ಆಗಮಿಸಿ ಆ ತಂತಿಯನ್ನು ಮತ್ತೆ ಕಂಬಕ್ಕೆ ಕಟ್ಟುವ ಮೂಲಕ ಅಲ್ಲಿ ಆವರಿಸಿದ್ದ ಭೀತಿ ವಾತಾವರಣವನ್ನು ನಿವಾರಿಸಿದರು. ರಕ್ಷಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಇತರ ಸಿಬ್ಬಂದಿಗಳಾದ ಕೆ.ಆರ್. ಅಜೀಶ್, ಎಸ್. ಅಭಿಲಾಶ್, ಕೆ.ವಿ. ಜಿತಿನ್ ಕೃಷ್ಣನ್, ಹೋಮ್ಗಾರ್ಡ್ ಪಿ. ರಾಜೇಶ್ ಎಂಬವರು ಒಳಗೊಂಡಿದ್ದರು. ಇನ್ನೊಂದೆಡೆ ನಗರದ ಅಣಂಗೂರು ಜರ್ನಲಿಸ್ಟ್ ಕಾಲನಿಯ ಹಾರಿಸ್ ಎಂಬವರ ಹಿತ್ತಿಲಿನ ತೆಂಗಿನ ಮರಕ್ಕೆ ನಿನ್ನೆ ಬೆಂಕಿ ತಗಲಿ ಅದನ್ನೂ ಅಗ್ನಿಶಾಮಕದಳದವರು ನಂದಿಸಿ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ತೆಂಗಿನ ಮರದ ಬುಡದಲ್ಲಿ ತ್ಯಾಜ್ಯಗಳಿಗೆ ಬೆಂಕಿ ಹಾಕಲಾಗಿತ್ತು. ಅದರಿಂದಾಗಿ ಬೆಂಕಿ ತೆಂಗಿನ ಮರಕ್ಕೂ ತಗಲಿತ್ತು.
