ತಿರುವನಂತಪುರ: ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುವ ‘ಪೋತ್ತಿಯೆ ಕೇಟ್ಟಿಯೆ’ ಎಂಬ ಅನುಕರಣೆ ಹಾಡಿನ ವಿರುದ್ಧ ಡಿಜಿಪಿಗೆ ಸಲ್ಲಿಸಲಾದ ದೂರಿನಲ್ಲಿ ಪ್ರಾಥಮಿಕ ತನಿಖೆ ಆರಂಭಗೊಂಡಿದೆ. ದೂರನ್ನು ಡಿಜಿಪಿ ಎಡಿಜಿಪಿಗೆ ಹಸ್ತಾಂತರಿಸಿದ್ದಾರೆ. ಹಾಡಿನಲ್ಲಿ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುವ ಭಾಗಗಳಿವೆಯೇ ಎಂದು ಪರಿಶೀಲಿಸಲಾಗುವುದು. ಈ ಬಗ್ಗೆ ಕಾನೂನು ಸಲಹೆ ಪಡೆದ ಬಳಿಕ ಮಾತ್ರವೇ ಕೇಸು ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಅಯ್ಯಪ್ಪ ಭಕ್ತರನ್ನು ಅವಹೇಳನಗೈಯ್ಯುವ ರೀತಿಯ ಹಾಡನ್ನು ಹಿಂತೆಗೆಯಬೇಕೆಂದು ಆಗ್ರಹಿಸಿ ತಿರುವಾಭರಣ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಳಿಕ್ಕಾಲ ಡಿಜಿಪಿಗೆ ದೂರು ಸಲ್ಲಿಸಿದ್ದರು. ಅಲ್ಲದೆ ಹಾಡು ಧಾರ್ಮಿಕ ಭಾವನೆಗೆ ಭಂಗ ಸೃಷ್ಟಿಸು ವಂತದ್ದಾಗಿದೆಯೆಂದು ಆರೋಪಿಸಿ ಸಿಪಿಎಂ ಕೂಡಾ ರಂಗಕ್ಕಿಳಿದಿದೆ. ಶಬರಿಮಲೆ ಚಿನ್ನ ಕಳವು ವಿಷಯ ಮುಖ್ಯ ಚರ್ಚೆಯಾಗಿದ್ದ ಚುನಾವಣೆ ಮುಗಿದರೂ ಹಾಡು ಈಗಲೂ ವ್ಯಾಪಕವಾಗಿ ಹರಡುತ್ತಿದೆ. ಈ ಹಾಡನ್ನು ಕೇರಳದ ಯುಡಿಎಫ್ ಸಂಸದರೂ ಕೂಡಾ ಪಾರ್ಲಿಮೆಂಟಿನ ಮುಂದೆ ಹಾಡಿ ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದರು.







