ರಾಷ್ಟ್ರಪತಿ ಇಂದು ಕೇರಳಕ್ಕೆ ನಾಳೆ ಶಬರಿಮಲೆಗೆ

ತಿರುವನಂತಪುರ: ನಾಲ್ಕು ದಿನಗಳ ಸಂದರ್ಶನಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಸಂಜೆ  ನೌಕಾಪಡೆಯ ವಿಶೇಷ ವಿಮಾನದಲ್ಲಿ ತಿರುವನಂತಪುರಕ್ಕೆ ಆಗಮಿಸುವರು. ಇಂದು ರಾಜ್‌ಭವನದಲ್ಲಿ  ಉಳಿದುಕೊಳ್ಳುವ ಅವರು ಅಲ್ಲಿಂದ ನಾಳೆ ಬೆಳಿಗ್ಗೆ 9.35ಕ್ಕೆ ಹೆಲಿಕಾಫ್ಟರ್‌ನಲ್ಲಿ ನಿಲೈಕಲ್‌ಗೆ ಹೋಗುವರು.  ನಂತರ ಕಾರಿನಲ್ಲಿ ಪಂಪಾಗೆ ತಲುಪುವರು. ಅಲ್ಲಿಂದ ವಿಶೇಷ ವಾಹನದಲ್ಲಿ ಶಬರಿಮಲೆ ದೇಗುಲ ಸನ್ನಿಧಾನಕ್ಕೆ ಆಗಮಿಸಿ ದೇವರ ದರ್ಶನ ನಡೆಸುವರು. ರಾಷ್ಟ್ರಪತಿ ಸಂದರ್ಶನ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ವಿಶೇಷ ನಿಯಂತ್ರಣ ಹಾಗೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಶಬರಿಮಲೆ ದರ್ಶನದ ನಂತರ ತಿರುವನಂತಪುರಕ್ಕೆ ಹಿಂತಿರುಗಲಿರುವ ರಾಷ್ಟ್ರಪತಿ 23ರಂದು ಬೆಳಿಗ್ಗೆ ರಾಜ್‌ಭವನದ ಅಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದಿ| ಕೆ.ಆರ್. ನಾರಾಯಣನ್‌ರ ಪ್ರತಿಮೆಯನ್ನು ಅನಾವರಣಗೊಳಿ ಸುವರು. ಮಧ್ಯಾಹ್ನ 12.50ಕ್ಕೆ ಶಿವಗಿರಿ ಮಠಕ್ಕೆ ತೆರಳಿ ಆಗಮಿಸಿ ಅಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಹಾಸಮಾಧಿಯ ಶತಾಬ್ದಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಂಜೆ 4.15ಕ್ಕೆ ಪಾಲಾ ಸೈಂಟ್ ಥೋಮಸ್ ಕಾಲೇಜಿನ  ಪ್ಲಾಟಿನಂ  ಸಮಾರಂಭದ ಉದ್ಘಾಟನೆ ನೆರವೇರಿಸುವರು. ಅ. 24ರಂದು ಮಧ್ಯಾಹ್ನ 12.10ಕ್ಕೆ ಎರ್ನಾಕುಳಂ ಸೈಂಟ್ ಥೆರೇಸಾ ಕಾಲೇಜಿನ ಶತಾಬ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ರಾಷ್ಟ್ರಪತಿ ನಂತರ ಅಲ್ಲಿಂದ ದಿಲ್ಲಿಗೆ ಹಿಂತಿರುಗುವರು.

You cannot copy contents of this page