ಕಾಸರಗೋಡು: ಚೆರ್ಕಳ-ಉಕ್ಕಿ ನಡ್ಕ ರಸ್ತೆಯ ಶೋಚನೀಯಾವಸ್ಥೆಯನ್ನು ಪರಿಹರಿಸಲು ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಈ ತಿಂಗಳ 19ರಿಂದ ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿವೆ ಎಂದು ಪ್ರೈಡ್ ಬಸ್ ಕಾರ್ಮಿಕರ ಯೂನಿಯನ್ ವಲಯ ಅಧ್ಯಕ್ಷ ಹಾರಿಸ್ ಪಿ.ಎಂ.ಎಸ್. ತಿಳಿಸಿದ್ದಾರೆ. ಈ ರಸ್ತೆಯಲ್ಲಿ ಚೆರ್ಕಳದಿಂದ ಉಕ್ಕಿನಡ್ಕವರೆಗಿನ ೧೯ ಕಿಲೋ ಮೀಟರ್ ಹೊಂಡಗಳಿಂದ ತುಂಬಿಕೊಂಡು ಒಂದು ವರ್ಷ ಕಳೆಯಿತು. ವಾಹನಗಳು ಹೊಂಡಕ್ಕೆ ಬಿದ್ದು ಎದ್ದು ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರು ತೀವ್ರ ನೋವು ಎದುರಿಸಬೇಕಾಗಿ ಬರುತ್ತಿದೆ. ಬಸ್‌ನೊಳಗೆ ಪ್ರಯಾಣಿಕರು ಬಿದ್ದು ಗಾಯಗೊಳ್ಳುವ ಘಟನೆಗಳು ನಿತ್ಯ ಸಂಭವಿಸುತ್ತಿದೆ. ಬಸ್‌ಗಳಿಗೆ ಪ್ರತೀ ದಿನ ದುರಸ್ತಿ ಕೆಲಸಗಳು ಅನಿವಾರ್ಯವಾಗುತ್ತಿದೆ.
ದ್ವಿಚಕ್ರ ವಾಹನಗಳ ಸಂಚಾರವೂ ದಯನೀಯವಾಗಿದೆ. ಈ ರೂಟ್‌ನಲ್ಲಿ ವಾಹನಗಳು ಅಪಘಾತಕ್ಕೀಡಾಗದ ದಿನಗಳಿಲ್ಲ. ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರಯೋಗ್ಯಗೊಳಿಸಲು ಒಂದು ತಿಂಗಳ ಹಿಂದೆ 4೦ ಲಕ್ಷ ರೂಪಾಯಿ ಮಂಜೂರು ಮಾಡಲು ಕ್ರಮ ಪೂರ್ಣಗೊಂಡಿದ್ದರೂ ಸಂಬಂಧಪಟ್ಟ ನೌಕರರು ಯೋಜನೆಯನ್ನು ಜ್ಯಾರಿಗೊಳಿಸಲು ಮುಂದಾಗಿಲ್ಲವೆಂದೂ ಹಾರಿಸ್ ಆರೋಪಿಸಿದ್ದಾರೆ. ರಸ್ತೆ ನಿರ್ಮಾಣದ ಬಳಿಕ ಐದು ವರ್ಷದೊಳಗೆ ಹಾನಿ ಉಂಟಾದಲ್ಲಿ ಗುತ್ತಿಗೆದಾರರೇ ಸ್ವಂತ ಖರ್ಚಿನಲ್ಲಿ ದುರಸ್ತಿ ನಡೆಸಬೇಕೆಂಬ ವ್ಯವಸ್ಥೆ ಇರುವ ಈ ರಾಜ್ಯದಲ್ಲಿ ಈ ರೂಟ್‌ನಲ್ಲಿ ಅದನ್ನು ಜ್ಯಾರಿಗೊಳಿಸದಿರಲು ಕಾರಣವೇನೆಂದೂ ಹಾರಿಸ್ ಪ್ರಶ್ನಿಸಿದ್ದಾರೆ. ರಸ್ತೆ ನಿರ್ಮಾಣ ಸಮಯದಲ್ಲಿ ಅದರ ಗುಣಮಟ್ಟ ಖಚಿತಪಡಿಸಲು ಸಾಧ್ಯವಾಗದ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರು ಭಯಪಡುತ್ತಿರುವುದು ಗುತ್ತಿಗೆದಾರರನ್ನಾಗಿದೆಯೇ ಎಂದು ಸಂಶಯ ಉಂಟಾಗಿದೆ ಎಂದು ಹಾರಿಸ್ ತಿಳಿಸಿದ್ದಾರೆ. ಈ ಕುರಿತಾಗಿ ಜಿಲ್ಲಾಧಿಕಾರಿ ಹಾಗೂ ಕಿಫ್‌ಬಿ ಅಧಿಕಾರಿಗಳಿಗೆ ಹಾರಿಸ್ ಮನವಿ ಸಲ್ಲಿಸಿದ್ದಾರೆ.







