ಕಾಸರಗೋಡು: ಗಡಿನಾಡು ಕನ್ನಡಿಗರ ಸಮಸ್ಯೆಗಳು ಹಾಗೂ ಕೇರಳ ಸರಕಾರದ ಮಲೆಯಾಳ ಭಾಷಾಬಿಲ್ -2025 ತಡೆ ಹಿಡಿಯಬೇಕೆಂದು ಆಗ್ರಹಿಸಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಸರಗೋಡಿಗೆ ತಲುಪಿದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಕೇರಳ ಸರಕಾರದ ಪ್ರಸ್ತಾಪಿತ ಬಿಲ್ ಸಂಪೂರ್ಣ ಅಸಂವಿಧಾನಿಕವಾ ಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕನ್ನಡಿಗರ ಹಿತಾಸಕ್ತಿಗೆ ಮಾರಕವಾಗಿದೆ. ಭಾರತ ಸರಕಾರದ ಅಲ್ಪ ಸಂಖ್ಯಾತ ಸಚಿವಾಲಯ ಕೇರಳ ಸರಕಾರಕ್ಕೆ ಹಲವಾರು ಬಾರಿ ಭಾಷಾ ಅಲ್ಪಸಂಖ್ಯಾತರ ಹಿತ ರಕ್ಷಿಸಬೇಕೆಂದು ಸೂಚನೆ ನೀಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದಲ್ಲದೆ ಭಾರತ ಸಂವಿಧಾನದ ಪ್ರಕಾರ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕಾತಿ ಖಡ್ಡಾಯಗೊಳಿಸಬೇಕು, ಕಾಸರಗೋ ಡಿನ ಪೊಲೀಸ್ ಠಾಣೆಗಳು, ರೈಲು ನಿಲ್ದಾಣಗಳು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕನ್ನಡ ನಾಮಫಲಕಗಳನ್ನು ಸ್ಥಾಪಿಸಬೇಕು, ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕ ವ್ಯವಹಾರ ಕನ್ನಡ ಭಾಷೆಯಲ್ಲಿ ಇರಬೇಕು, ಉದ್ಯೋಗ ಖಾಲಿ ಸ್ಥಾನಗಳ ಕುರಿತಂತೆ ಪಿಎಸ್‌ಸಿ ಅಥವಾ ನೇಮ ಕಾತಿ ಸಂಸ್ಥೆಯಿಂದ ಬರುವ ಅರ್ಜಿಗಳ ಆಧಾರದ ಮೇಲೆ ಭರ್ತಿಗೊಳಿಸದೆ ಸ್ಥಳೀಯ ಭಾಷಾ ಅಲ್ಪಸಂಖ್ಯಾತರ ಜನಸಂಖ್ಯಾ ಆಧಾರದ ಮೇಲೆ ಭರ್ತಿ ಮಾಡಬೇಕು, ಭಾಷಾ ಅಲ್ಪಸಂಖ್ಯಾತರು ಎದುರಿಸುವ ಸಮಸ್ಯೆಗಳ ಬಗ್ಗೆ ಪ್ರತೀ ಎರಡು ತಿಂಗಳಿಗೊಮ್ಮೆ ಸಭೆಗಳನ್ನು ನಡೆಸಲು ಜಿಲ್ಲಾಧಿಕಾರಿ ಸಮಿತಿ ಕ್ರಮ ಕೈಗೊಳ್ಳಬೇಕು, ಕಾಸರಗೋಡಿನ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ೧ನೇ ತರಗತಿಯಿಂದ 10ನೇ ತರಗತಿ ತನಕ ಕಡ್ಡಾಯ ಮಲೆಯಾಳ ಹೇರಿಕೆಯನ್ನು ಹಿಂತೆಗೆಯಬೇಕು ಮೊದಲಾದ ಬೇಡಿಕೆಗಳನ್ನಿಟ್ಟು ಮನವಿ ಸಲ್ಲಿಸಲಾಗಿದೆ.
ಈ ಬಗ್ಗೆ ಮನವಿ ನೀಡಿದ ತಂಡದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ತೆಕ್ಕೇಕರೆ ಶಂಕರನಾರಾ ಯಣ ಭಟ್, ಕ.ಸಾ.ಪ. ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಮುರಳೀಧರ ಬಳ್ಳಕ್ಕುರಾಯ, ಸುಕೇಶ್ ಎ. ಭಾಗವಹಿಸಿದರು. ನಿನ್ನೆ ಕಾಸರಗೋಡಿಗೆ ತಲುಪಿದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಖರ್‌ರಿಗೆ ಈ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ರಾಜ್ಯಪಾಲರು ಈ ಬಗ್ಗೆ ಪರಿಶೀಲಿಸಿ ಕನ್ನಡಿಗರ ಹಿತ ಕಾಯುವ ನಿಲುವು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.







