ಕಾಸರಗೋಡಿನ ಅಡಿಕೆ ಕೃಷಿಕರ ಸಮಸ್ಯೆಗಳನ್ನು ಸರಕಾರದ ಮುಂದಿಟ್ಟ ಶಾಸಕ ಎನ್.ಎ. ನೆಲ್ಲಿಕುನ್ನು; ಅಡಿಕೆ ಕೃಷಿಕರಿಗೆ ನಷ್ಟ ಪರಿಹಾರ ದೊರಕಿಸಲು ಸರಕಾರದಿಂದ ಕ್ರಮ- ಸಚಿವ

ತಿರುವನಂತಪುರ: ಕಾಸರಗೋಡು ಜಿಲ್ಲೆಯ ಅಡಿಕೆ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಕೃಷಿ ಸಚಿವ ಪಿ. ಪ್ರಸಾದ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ವಿಧಾನಸಭೆಯಲ್ಲಿ ಮಾತನಾಡಿ, ಕಾಸರಗೋಡಿನ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಉತ್ತರಿಸಿ ಸಚಿವ ಕೃಷಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಅಡಿಕೆ ಕೃಷಿಯನ್ನು ಪ್ರೋತ್ಸಾಹಿಸಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಯೋಜನೆ ರೂಪಿಸಲಾಗುವುದು, ಇನ್ನಷ್ಟು ಕೃಷಿಕರನ್ನು ಕೃಷಿ ವಿಮೆಯಲ್ಲಿ ಸೇರ್ಪಡೆಗೊಳಿಸಲಾಗುವುದು. ಈ ಮೂಲಕ ಕೃಷಿ ನಾಶಗೊಂಡ ಕೃಷಿಕರಿಗೆ ತಲಾ ಒಂದು ಲಕ್ಷ ರೂಪಾಯಿ ನಷ್ಟ ಪರಿಹಾರ ಲಭಿಸಲಿದೆ. ಕಾಸರಗೋಡು ಜಿಲ್ಲೆಯ ೩೫ ಕೃಷಿ ಭವನಗಳ ಮೂಲಕ ಕೃಷಿಕರಿಗೆ ಸೌಲಭ್ಯ ಲಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಅಡಿಕೆ ಕೃಷಿಗೆ ಪ್ರೋತ್ಸಾಹ ನೀಡಲು ಕೃಷಿ ಇಲಾಖೆ, ಕೇಂದ್ರ ತೋಟಗಾರಿಕಾ ಇಲಾಖೆ, ಕೃಷಿ ವಿಶ್ವ ವಿದ್ಯಾಲಯದ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರೂಪೀಕರಿಸಲಾಗಿದೆ. ಇತ್ತೀಚೆಗೆ ಕಾಸರಗೋಡಿನ ಶಾಸಕರು, ಜಿಲ್ಲಾಧಿಕಾರಿ ಹಾಗೂ ಕೃಷಿ ವಿಜ್ಞಾನಿಗಳ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಸಭೆ ಕರೆದು ಅಡಿಕೆ ಕೃಷಿಕರ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ.  ಅಡಿಕೆ ಮರಗಳಿಗೆ ತರಲುವ ಮಹಾಳಿ ರೋಗ ಪರಿಹಾರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಾರ್ಟಿಕಲ್ಚರ್ ಇಲಾಖೆಯೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ನಿನ್ನೆ ಮಾತನಾಡಿದ ಶಾಸಕ ಎನ್.ಎ. ನೆಲ್ಲಿಕುನ್ನು ಕಾಸರಗೋಡಿನಲ್ಲಿ ಅಡಿಕೆ ಕೃಷಿಗೆ ಬಾಧಿಸಿರುವ ಮಹಾಳಿ ರೋಗ ಹಾಗೂ ಎಲೆ ಚುಕ್ಕಿ ರೋಗದ ಕುರಿತು ಸರಕಾರದ ಗಮನಕ್ಕೆ ತಂದಿದ್ದಾರೆ. ಈ ರೋಗಗಳಿಂದಾಗಿ ಬಹುತೇಕ ಅಡಿಕೆ ಬೆಳೆಯುವ ಮೊದಲೇ ಉದುರಿ ನಾಶಗೊಂಡಿದೆ. ಈ ಬಾರಿ ಸುರಿದ ಅಪರಿಮಿತ ಮಳೆ ಹಾಗೂ ಹವಾಮಾನ ವೈಪರೀತ್ಯವೇ ಅಡಿಕೆ ನಾಶಗೊಳ್ಳಲು ಕಾರಣವಾಗಿದೆ. ಬೋರ್ಡೊ ಮಿಶ್ರಣ ಸಿಂಪಡಿಸಿದರೂ ರೋಗವನ್ನು ಹತೋಟಿಗೆ ತರಲು ಸಾಧ್ಯವಾಗಿಲ್ಲ. ಇದರಿಂದ  ಕೃಷಿಕರಿಗೆ ಸೂಕ್ತ ನಷ್ಟ ಪರಿಹಾರ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು, ಅಡಿಕೆ ನಾಶಗೊಂಡ ಕೃಷಿಕರಿಗೆ ನಷ್ಟ ಪರಿಹಾರ ನೀಡಬೇಕು, ಕೃಷಿಕರ ಸಾಲಕ್ಕೆ ಮೂರು ವರ್ಷವರೆಗೆ ಮೊರಿಟೋರಿಯಂ ವಿಸ್ತರಿಸಬೇಕು, ಕೃಷಿಕರಿಗೆ ಅಗತ್ಯವುಳ್ಳ ವಿದ್ಯುತ್ ಉಚಿತವಾಗಿ ನೀಡಬೇಕು, ಕೃಷಿಗೆ ಆಧುನಿಕ ಉಪಕರಣಗಳನ್ನು ಖರೀದಿಸಲು ಸರಕಾರ ಸಬ್ಸಿಡಿ ನೀಡಬೇಕು ಮೊದಲಾದ ಬೇಡಿಕೆಗಳನ್ನು ಶಾಸಕರು ಸರಕಾರದ ಮುಂದಿಟ್ಟಿದ್ದಾರೆ.ಇತ್ತೀಚೆಗೆ ಕಾಸರಗೋಡಿನ ಅಡಿಕೆ ಕೃಷಿಕರ ಸಮಸ್ಯೆಗಳನ್ನು ವಿವರಿಸಿ  ಕಿಸಾನ್ ಸೇನೆ ಜಿಲ್ಲಾ ಸಮಿತಿ ಶಾಸಕ ಎನ್.ಎ. ನೆಲ್ಲಿಕುನ್ನು ಅವರಿಗೆ ಮನವಿ ಸಲ್ಲಿಸಿತ್ತು. ಕಿಸಾನ್ ಸೇನೆ ಜಿಲ್ಲಾ ಸಮಿತಿ ಅಧ್ಯಕ್ಷ ಗೋವಿಂದ ಭಟ್ ಕೊಟ್ಟಂಗುಳಿ, ಪದಾಧಿಕಾರಿಗಳಾದ ಕಲ್ಲಗ ಚಂದ್ರಶೇಖರ ರಾವ್, ಶುಕೂರ್ ಪುತ್ತಿಗೆ,  ಸಚಿನ್ ಕುಂಟಾರು ಮೊದಲಾದವರು ಶಾಸಕರನ್ನು ಭೇಟಿಯಾಗಿ ಕೃಷಿಕರಿಗೆ ಸೂಕ್ತ ನಷ್ಟ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದ್ದರು. ಇದೀಗ ವಿಧಾನಸಭೆಯಲ್ಲಿ ಅಡಿಕೆ ಕೃಷಿಕರ ಸಮಸ್ಯೆಗಳನ್ನು ಮಂಡಿಸಿ ಸರಕಾರದ ಗಮನಕ್ಕೆ ತಂದ ಶಾಸಕ ಎನ್.ಎ. ನೆಲ್ಲಿಕುನ್ನು ಅವರನ್ನು ಕಿಸಾನ್ ಸೇನೆ ಜಿಲ್ಲಾ ಸಮಿತಿ ಅಭಿನಂದಿಸಿದೆ.

You cannot copy contents of this page