ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಪ್ರತಿಷ್ಠಾನ ಕಾಸರಗೋಡು ಹಾಗೂ ಕೇರಳ ತುಳು ಅಕಾಡೆಮಿ ಮಂಜೇಶ್ವರ, ಕೇರಳ ಸರ ಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ತುಳುರತ್ನ, ಬಹುಭಾಷಾ ವಿದ್ವಾಂಸ ಡಾ. ಪಿ.ವೆಂಕಟರಾಜ ಪುಣಿಂಚಿತ್ತಾಯರ ‘ಪುವೆಂಪು ನೆನಪು-2025’ ಕಾರ್ಯ ಕ್ರಮ ಇಂದು ಬೆಳಿಗ್ಗೆ ಹೊಸಂಗಡಿ ಸಮೀಪದ ದುರ್ಗಿ ಪಳ್ಳದಲ್ಲಿರುವ ಕೇರಳ ತುಳು ಅಕಾಡೆಮಿ ಸಭಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಭಾವ ಗಾಯನ, ನೃತ್ಯ ವೈಭವ, ಪ್ರಶಸ್ತಿ ವಿತರಣೆ ಸಮಾರಂಭ ನಡೆಯಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಎಸ್. ಹೊರಟ್ಟಿ ಉದ್ಘಾಟಿಸಿದರು. ಮಂಗಳೂರು ಬೆಸೆಂಟ್ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥೆ ಡಾ. ಮೀನಾಕ್ಷಿ ರಾಮಚಂದ್ರ ನುಡಿ ನಮನ ಸಲ್ಲಿಸಿದರು. ಈ ಸಂದರ್ಭ ಹಿರಿಯ ಸಾಹಿತಿ, ಚಿಂತಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಜಿ. ಸಿದ್ದರಾಮಯ್ಯರಿಗೆ ‘ಪುವೆಂಪು ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಮಾಜಿ ಸಚಿವ, ಕರ್ನಾಟಕ ಸರಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್. ಎಂ. ರೇವಣ್ಣ ಪ್ರಶಸ್ತಿ ಪ್ರದಾನಮಾಡಿದರು.
ಮಧ್ಯಾಹ್ನ 12ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿ ಯಲಿದೆ. 12.30 ರಿಂದ ಪುವೆಂಪು ಚತುರ್ಭಾಷಾ ಕಾವ್ಯ ಸಂವಾದ ನಡೆಯಲಿದೆ.