ಕಾಸರಗೋಡು: ಸಿಪಿಎಂ ನೇತಾರನ ವಿರುದ್ಧ ಕೇಳಿ ಬಂದ ಅತ್ಯಾಚಾರ ಪ್ರಕರಣದಲ್ಲಿ ದೂರುದಾತೆಯಿಂದ ನ್ಯಾಯಾಲಯ ಗುಪ್ತ ಹೇಳಿಕೆ ದಾಖಲಿಸಿಕೊಂಡಿದೆ. ಕಾಸರಗೋಡು ಮಹಿಳಾ ಠಾಣೆಯ ಎಸ್‌ಐ ಕೆ. ಅಜಿತ ದೂರುದಾತೆ ಯಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಆಕೆಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಇದೇ ವೇಳೆ ವೈದ್ಯಕೀಯ ತಪಾಸಣೆಗೆ ವಿಧೇಯಗೊಳಿಸಬೇಕೆಂಬ ಪೊಲೀಸರ ಆಗ್ರಹಕ್ಕೆ ದೂರುದಾತೆಯಾದ ಗೃಹಿಣಿಯಿಂದ ಅನುಕೂಲ ಪ್ರತಿಕ್ರಿಯೆ ಉಂಟಾಗಿಲ್ಲವೆಂಬ ಸೂಚನೆಯಿದೆ. ಸಿಪಿಎಂ ಮಾಜಿ ಕುಂಬಳೆ ಏರಿಯಾ ಸೆಕ್ರೆಟರಿಯೂ ಪ್ರಸ್ತುತ ಎಣ್ಮಕಜೆ ಪಂಚಾಯತ್ ಸದಸ್ಯನೂ, ಇಚ್ಲಂಪಾಡಿ ಶಾಲೆ ಅಧ್ಯಾಪಕನಾದ ಸುಧಾಕರ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
1995ರಿಂದ ನಿರಂತರವಾಗಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಗೃಹಿಣಿ ಡಿಜಿಪಿಗೆ ದೂರು ನೀಡಿದ್ದಳು. ತನಗೆ ಹಾಗೂ ಮಕ್ಕಳಿಗೆ ಕೊಲೆ ಬೆದರಿಕೆಯೊಡ್ಡಿರುವು ದಾಗಿಯೂ ದೂರಿನಲ್ಲಿ ತಿಳಿಸಲಾಗಿತ್ತು.






