ಪೈವಳಿಕೆ: ಪಂಚಾಯತ್‌ನ ೧ನೇ ವಾರ್ಡ್ ವ್ಯಾಪ್ತಿಯ ಕುರುಡಪದವು-ಕೊಮ್ಮಂಗಳ ರಸ್ತೆಯಲ್ಲಿ ಸಂಚಾರವೇ ಅಸಾಧ್ಯ ವಾದ ಸ್ಥಿತಿಗೆ ತಲುಪಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ರಸ್ತೆಯಗೆ ಕಳೆದ ಮಾರ್ಚ್‌ನಲ್ಲಿ ಡಾಮರೀಕರಣ ನಡೆಸಲಾಗಿತ್ತು. ಆದರೆ ಈ ರಸ್ತೆ ಮೂಲಕ ದಿನಂಪ್ರತಿ ಕೆಂಪುಕಲ್ಲು ಸಾಗಾಟದ ಲಾರಿಗಳು ಅವ್ಯಾಹತ ವಾಗಿ ಸಂಚರಿಸಿರುವುದು ರಸ್ತೆಯ ದುರಸ್ತಿಗೆ ಕಾರಣವೆಂದು ಸ್ಥಳೀಯರು ದೂರಿದ್ದಾರೆ. ರಸ್ತೆಯ ದುರಸ್ತಿಗೆ ಈಗ ಮತ್ತೆ ಹಣ ಮಂಜೂರಾಗಿದ್ದು, ಆದರೆ ಈ ಮೂಲಕ ಸಾಗುವ ಲಾರಿಗಳಿಗೆ ನಿಯಂತ್ರಣ ಹೇರದಿದ್ದಲ್ಲಿ ದುರಸ್ತಿ ಬಳಿಕವೂ ರಸ್ತೆ ಇದೇ ಸ್ಥಿತಿಗೆ ತಲುಪಬಹುದೆಂದು ಸ್ಥಳೀಯರು ತಿಳಿಸಿದ್ದಾರೆ. ಕರ್ನಾಟಕ ಭಾಗಕ್ಕೆ ಹಗಲು-ರಾತ್ರಿ ನೂರಾರು ಲಾರಿಗಳು ಕೆಂಪುಕಲ್ಲು ಹೇರಿ ಕೊಂಡು ಸಂಚರಿಸುತ್ತಿರುವುದಾಗಿ ದೂರಲಾಗಿದೆ. ಈಗ ಈ ರಸ್ತೆ ಪೂರ್ತಿ ಹೊಂಡಗಳಿಂದ ತುಂಬಿದ್ದು, ವಾಹನಗಳು ಬಿಟ್ಟು ಮನುಷ್ಯರಿಗೇ ನಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ದುರಸ್ತಿಗೊಂಡ ಬಳಿಕವಾದರೂ ಕೆಂಪುಕಲ್ಲು ಸಾಗಾಟದ ಲಾರಿಗಳನ್ನು ನಿಯಂತ್ರಿಸಲು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.







