ಜನಪ್ರತಿನಿಧಿಗಳು ಕೇಂದ್ರ ಯೋಜನೆಗಳ ಪ್ರಚಾರಕರಾಗಬೇಕು- ವಿ.ಕೆ. ಸಜೀವನ್

ಕಾಸರಗೋಡು: ಗರಿಷ್ಠ ಸಂಖ್ಯೆಯ ಪ್ರಜೆಗಳನ್ನು ಪ್ರಧಾನಮಂತ್ರಿಯವರ ಕ್ಷೇಮ ಯೋಜನೆಗಳ ಫಲಾನುಭವಿಗಳಾಗಿಸಲು ಬಿಜೆಪಿ ಜನಪ್ರತಿನಿಧಿಗಳು ಮುಂದೆ ಬರಬೇಕೆಂದೂ, ಜನಕ್ಷೇಮ ಯೋಜನೆಗಳ ಪ್ರಚಾರಕರಾಗಿ ಅವರು ಕಾರ್ಯಾಚರಿಸಬೇಕೆಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆದ ಬಿಜೆಪಿ ಜನಪ್ರತಿನಿಧಿಗಳ ಮೊದಲ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ಸರಕಾರದ ಜನಕ್ಷೇಮ ಯೋಜನೆಗಳು ಕೇರಳದಲ್ಲಿ ಜ್ಯಾರಿಗೊಂಡರೆ ಬಿಜೆಪಿಗೆ ರಾಜಕೀಯ ಸಾಧನೆ ಉಂಟಾಗಲಿದೆ ಎಂದು ಪಿಣರಾಯಿ ವಿಜಯನ್ ಸರಕಾರ ಭಯಪಡುತ್ತಿದೆ. ಆದ್ದರಿಂದ  ಹಲವು ಕೇಂದ್ರ ಯೋಜನೆಗಳನ್ನು ರಾಜ್ಯದಲ್ಲಿ ಜ್ಯಾರಿಗೊಳಿಸಲು ಮುಂದಾಗುತ್ತಿಲ್ಲ. ಅಲ್ಲದೆ ಹೆಸರು ಬದಲಿಸಿ ಯೋಜನೆಗಳನ್ನು ಜ್ಯಾರಿಗೊಳಿಸಲು ಯತ್ನಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬಿಜೆಪಿ ಆಡಳಿತ ನಡೆಸುವ ಐದು ಪಂಚಾಯತ್‌ಗಳಲ್ಲಿ ಉತ್ತಮ ಆಡಳಿತ ಸಾಧಿಸಲಿರುವ ಪ್ರಯತ್ನ ಜನಪ್ರತಿನಿಧಿಗಳ ಭಾಗದಿಂದ ಉಂಟಾಗಬೇಕೆಂದೂ ವಿ.ಕೆ. ಸಜೀವನ್ ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ವಲಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ. ಕಾಶೀನಾಥ್ ಜನಪ್ರತಿನಿಧಿಗಳು ಹಾಗೂ ಸಂಘಟನಾಪರವಾದ ಹೊಣೆಗಾರಿಕೆ ಎಂಬ ವಿಷಯದ ಕುರಿತು ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಮನುಲಾಲ್ ಮೇಲತ್, ಜಿಲ್ಲಾ ಉಪಾಧ್ಯಕ್ಷ, ಪಿ. ರಮೇಶ್, ರಾಷ್ಟ್ರೀಯ ಕೌನ್ಸಿಲ್ ಸದಸ್ಯೆಯೂ  ದೇಲಂಪಾಡಿ ಪಂಚಾಯತ್ ಜನಪ್ರತಿನಿಧಿಯಾದ ಪ್ರಮೀಳಾ ಸಿ. ನಾಯ್ಕ್, ಜಿಲ್ಲಾ ಪಂ. ಸದಸ್ಯ ರಾಮಪ್ಪ ಮಂಜೇಶ್ವರ, ಮಧೂರು ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ. ಶಂಕರ, ಕಾರಡ್ಕ ಪಂ. ಅಧ್ಯಕ್ಷೆ ಎಂ. ಜನನಿ, ಕುಂಬ್ಡಾಜೆ ಪಂ. ಅಧ್ಯಕ್ಷೆ ಎನ್. ಯಶೋಧ, ಬೆಳ್ಳೂರು ಪಂ. ಅಧ್ಯಕ್ಷೆ ಮಾಲಿನಿ ಮೊದಲಾದವರು ಮಾತನಾಡಿದರು.

You cannot copy contents of this page