ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತ್ನಲ್ಲಿ ಸಿಬ್ಬಂದಿಗಳ ಕೊರತೆಯಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗ ಜಿಲ್ಲಾಧಿಕಾರಿ ಶ್ರೀ ಧನ್ಯಾ ಸುರೇಶ್ರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಒಂದು ವಾರದ ಹಿಂದೆ ಆಗಮಿಸಿದ ಕಾರ್ಯದರ್ಶಿ ವರ್ಗಾವಣೆ ಪಡೆದು ಹೋಗಲು ಪ್ರಯತ್ನ ಆರಂಭಿಸಿದ್ದಾರೆ. ಇಂಜಿನಿಯರ್, ಓವರ್ಸಿಯರ್ ಹುದ್ದೆಗಳು ಖಾಲಿಯಿವೆ. ಇದರಿಂದಾಗಿ ಕಟ್ಟಡ ನಿರ್ಮಾಣ ಸಂಬಂಧ ಅಗತ್ಯಗಳಿಗಾಗಿ ಜನರು ಸಂಕಷ್ಟಪಡುತ್ತಿದ್ದಾರೆ. ವಾರ್ಷಿಕ ಯೋಜನೆಯ ಕಡತಗಳು ಆರಂಭದ ಹಂತದಲ್ಲಿಯೇ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ,ಸ್ಥಾಯೀ ಸಮಿತಿ ಅಧ್ಯಕ್ಷರಾದ ಹಮೀದ್ ಕೆಡೆಂಜಿ, ಅವಿನಾಶ್ ವಿ. ರೈ, ಹಿರಿಯ ಸದಸ್ಯ ಬಾಲಕೃಷ್ಣ ಶೆಟ್ಟಿ ಜತೆಗಿದ್ದರು. ಬದಿಯಡ್ಕ ಗ್ರಾಮ ಪಂಚಾಯತ್ ಕಚೇರಿಗೆ ವರ್ಗಾವಣೆಗೊಂಡು ಬರುವ ಸಿಬ್ಬಂದಿಗಳು ಕನಿಷ್ಠ ಒಂದು ವರ್ಷವಾದರೂ ಕರ್ತವ್ಯ ನಿರ್ವಹಿಸುವಂತೆ ಆದೇಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.







