ಉಪ್ಪಳ: ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಆಟೋ ರಿಕ್ಷಾ ಅಪಘಾತಕ್ಕೀಡಾಗಿದ್ದು, ಈ ವೇಳೆ ಚಾಲಕ ಓಡಿ ಪರಾರಿಯಾಗಿದ್ದಾನೆ. ಆಟೋ ರಿಕ್ಷಾವನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ಚಾಲಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ನಿನ್ನೆ ಅಪರಾಹ್ನ 2.45ರ ವೇಳೆ ಉಪ್ಪಳ ಹಿದಾಯತ್ ಬಜಾರ್ನಲ್ಲಿ ಘಟನೆ ನಡೆದಿದೆ. ಉಪ್ಪಳ ಗೇಟ್ನಿಂದ ಉಪ್ಪಳ ಭಾಗಕ್ಕೆ ತೆರಳುತ್ತಿದ್ದ ರಿಕ್ಷಾ ಸರ್ವೀಸ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದರು. ರಿಕ್ಷಾ ಅಪಘಾತಕ್ಕೀಡಾದ ವಿಷಯ ತಿಳಿದು ಪೊಲೀಸರು ಅಲ್ಲ್ಲಿಗೆ ತಲುಪಿದಾಗ ಚಾಲಕ ನಾಪತ್ತೆಯಾಗಿದ್ದಾನೆ. ರಿಕ್ಷಾದಲ್ಲಿ ಹತ್ತು ಗೋಣಿ ಚೀಲಗಳಲ್ಲಿ ಹೊಯ್ಗೆ ತುಂಬಿಸಿಡಲಾಗಿತ್ತು. ಮಂಜೇಶ್ವರ ಎಸ್ಐ ಉಮೇಶ್ ಕೆ.ಆರ್ ನೇತೃತ್ವದ ಪೊಲೀಸರು ರಿಕ್ಷಾ ಹಾಗೂ ಹೊಯ್ಗೆಯನ್ನು ಠಾಣೆಗೆ ತಲುಪಿಸಿದ್ದಾರೆ.







