ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪೆರಿಂಗಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಕಳೆದ ಕೆಲವು ದಿನಗಳಿಂದ ಕಡಲಬ್ಬರ ತೀವ್ರಗೊಂಡಿದ್ದು ಇಲ್ಲಿನ ರಸ್ತೆ ಸಮುದ್ರಪಾಲಾಗಿದೆ. ಇದರಿಂದ ಪೆರಿಂಗಡಿ-ಮುಟ್ಟಂ ಪ್ರದೇಶಗಳ ಸಂಪರ್ಕಕ್ಕೆ ಅಸಾಧ್ಯವಾಗಿದೆ. ಇದೇ ವೇಳೆ ಸಮುದ್ರ ಕಿನಾರೆಯಲ್ಲಿರುವ ಹಲವು ಮನೆಗಳೂ ಅಪಾಯ ಭೀತಿಯನ್ನು ಎದುರಿಸುತ್ತಿದೆ. ಕಳೆದ ವರ್ಷವೂ ಇಲ್ಲಿ ಕಡಲ್ಕೊರೆತ ಉಂಟಾಗಿತ್ತು. ಇದರಿಂದ ರಸ್ತೆಯ ಸ್ವಲ್ಪ ಭಾಗ ಸಮುದ್ರ ಪಾಲಾಗಿತ್ತು. ಅಲ್ಲದೆ ಮನೆಗಳಿಗೂ ಅಪಾಯ ಉಂಟಾಗಿತ್ತು. ವಿದ್ಯುತ್ ಕಂಬಗಳು, ಗಾಳಿ ಮರಗಳು ನಾಶಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಕಡಲ್ಕೊರೆತ ತಡೆಯಲೆಂದು ಹೊಯ್ಗೆ ತುಂಬಿಸಿದ ಬೃಹತ್ ಗೋಣಿ ಚೀಲಗಳನ್ನು ಇರಿಸಲಾಗಿತ್ತು. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಆದರೆ ಇತ್ತೀಚೆಗಿನಿಂದ ತೀವ್ರಗೊಂಡ ಕಡಲ್ಕೊರೆತದಿಂದ ಹೊಯ್ಗೆ ತುಂಬಿಸಿದ ಗೋಣಿಯೂ ಸಮುದ್ರ ಪಾಲಾಗಿದೆ.
ಇದೇ ಸ್ಥಿತಿ ಮುಂದುವರಿದರೆ ಇಲ್ಲಿ ಭಾರೀ ಅಪಾಯ ಸಾಧ್ಯತೆ ಇದೆಯೆಂದೂ ಅದರಿಂದ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.






