ಪಂಚಾಯತ್ ಎಂದರೆ ಹೀಗಿರಬೇಕು!: ಕುಂಬಳೆ ಪಂ.ನಲ್ಲಿ ಆಡಳಿತ-ವಿಪಕ್ಷಗಳ ಮಧ್ಯೆ ತೀವ್ರ ಸೆಣಸಾಟ: ಭೋಜನ ಸೇವಿಸುವುದರಲ್ಲಿ ಸದಸ್ಯರು ಒಗ್ಗಟ್ಟು

ಕುಂಬಳೆ: ಭ್ರಷ್ಟಾಚಾರದ ವಿರುದ್ಧ ಪಕ್ಷಗಳ ಕಾರ್ಯಕರ್ತರು ಬೀದಿ ಗಿಳಿದು ಹೋರಾಟ ನಡೆಸುತ್ತಿರುವ ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ ಸದಸ್ಯರು ಭೋಜನ ಸೇವಿಸುವುದರಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಭ್ರಷ್ಟಾಚಾರ ವಿರುದ್ಧ ಇತ್ತೀಚೆಗಷ್ಟೇ ಪಂಚಾಯತ್‌ನ ಒಳಗೂ ಹೊರಗೂ ಹೋರಾಟಕ್ಕೆ ನೇತೃತ್ವ ನೀಡಿದ ವಿಪಕ್ಷ ಸದಸ್ಯರೂ, ಭ್ರಷ್ಟಾಚಾರ ಆರೋಪಕ್ಕೆಡೆಯಾದ ಆಡಳಿತ ಪಕ್ಷದ ಸದಸ್ಯರು ಹಾಗೂ ಅವರ ಜೊತೆಗೆ ಇತ್ತೀಚೆಗೆ ಆಡಳಿತ ಪಕ್ಷದ ವಿರುದ್ಧ ಆರೋಪಗಳ ಸುರಿಮಳೆಗೈದಿರುವ ಪಂಚಾಯತ್ ಕಾರ್ಯದರ್ಶಿ ಸಹಿತ ನಿನ್ನೆ ಮಧ್ಯಾಹ್ನ ಕುಂಬಳೆಯ ಆಡಂಭರ ಹೋಟೆಲ್‌ನಲ್ಲಿ ಒಗ್ಗಟ್ಟಾಗಿ ಒಂದೇ ಮೇಜಿನ ಸುತ್ತ ಕುಳಿತು ನಗುನಗುತ್ತಾ ಭೋಜನ ಸ್ವೀಕರಿಸಿ ಸಂತೋಷಪಟ್ಟರು.

ಕುಂಬಳೆ ಪೇಟೆಯ ಬಸ್ ವೈಟಿಂ ಗ್ ಶೆಡ್ ನಿರ್ಮಾಣಕ್ಕೆ  ಸಂಬಂಧಿಸಿ ಪಂಚಾಯತ್ ಅಧ್ಯಕ್ಷೆ ಯ ಪತಿ ವಿರುದ್ಧ ಪಂಚಾಯತ್ ಸೆಕ್ರೆಟರಿ ಪೊಲೀ ಸರಿಗೆ ದೂರು ನೀಡಿದ್ದರು. ಇದರಿಂದ ಭ್ರಷ್ಟಾಚಾರದಲ್ಲಿ  ಮುಳುಗಿರುವ ಪಂ ಚಾಯತ್ ಆಡಳಿತ ಸಮಿತಿ ಸಾರಥಿಗಳು ರಾಜೀನಾಮೆ ನೀಡಬೇಕೆಂದು ಒತ್ತಾ ಯಿಸಿ ಬಿಜೆಪಿ ಹಾಗೂ ಸಿಪಿಎಂ ನಡೆಸಿದ ಪಂಚಾಯತ್ ಕಚೇರಿ ಮಾರ್ಚ್, ಭ್ರಷ್ಟಾಚಾರ ಆಡಳಿತದ ವಿರುದ್ಧ ಬಿಜೆಪಿ ಮಂಡಿಸಿದ ಅವಿಶ್ವಾಸ ಗೊತ್ತುವಳಿ, ಸಾರ್ವಜನಿಕ ಶೌಚಾಲಯ ಭ್ರಷ್ಟಾಚಾರ ವಿರುದ್ಧದ ಹೋರಾಟ, ಪೇಟೆಯ ಕಾಲುದಾರಿಯಲ್ಲಿ ಬೀದಿ ವ್ಯಾಪಾರ ವಿರುದ್ಧ ಚಳವಳಿ, ವಿವಾದಿತ ಬಸ್ ವೈಟಿಂಗ್ ಶೆಡ್‌ನಲ್ಲಿ ಸ್ಥಾಪಿಸಿದ ಪಂ. ಸದಸ್ಯರ ಭಾವಚಿತ್ರಗಳಿಗೆ ಬಣ್ಣ ಬಳಿಯುವಿಕೆ, ಭಾವಚಿತ್ರಗಳನ್ನು ಹಾನಿಗೊಳಿಸುವಿಕೆ ಮೊದಲಾದ ಚಳವಳಿಗಳು ಕುಂಬಳೆ ಪಂಚಾಯತ್‌ನಲ್ಲಿ ಭಾರೀ ಸದ್ದುಗದ್ದಲಕ್ಕೆ ಕಾರಣವಾಗಿತ್ತು. ಈ ಘಟನೆಗಳ ಬಗ್ಗೆ  ಪಂಚಾಯತ್ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಇಡೀ  ಊರಿನ ಜನತೆ ಭಾರೀ ಚರ್ಚೆಯನ್ನು ನಡೆಸಿದ್ದರು.ಈ ಎಲ್ಲದರ ಮಧ್ಯೆ ನಿನ್ನೆ ನಡೆದ ಪಂಚಾಯತ್ ಆಡಳಿತ ಸಮಿತಿ ಸಭೆ ಮಧ್ಯಾಹ್ನ ಊಟದ ಮೊದಲು ಕೊನೆಗೊಳಿಸಿ ಪಂಚಾಯತ್ ಸದಸ್ಯರು  ಒಟ್ಟಾಗಿ ಕುಂಬಳೆಯ ಆಡಂಭರ ಹೋಟೆಲ್‌ವೊಂದಕ್ಕೆ ತೆರಳಿ ಒಂದೇ ಮೇಜಿನ ಸುತ್ತ ಕುಳಿತು ಹಲವು ಬಗೆಯ ಆಹಾರ ಸೇವಿಸಿ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಟೊಂಕಕಟ್ಟಿ ಬೀದಿಗಿಳಿದು ಚಳವಳಿ ನಡೆಸಿದವರು ಹಾಗೂ ಅದನ್ನು ಹಲವು ರೀತಿಯಲ್ಲಿ ವಿರೋಧಿಸಿದವರು ಪ್ರತಿಭಟನೆಯ ಬಿಸಿ ತಣಿಯುವ ಮೊದಲೇ ಎಲ್ಲವನ್ನು ಮರೆತು ಹೋಟೆಲ್‌ಗೆ ತೆರಳಿ ಭೂರಿ ಭೋಜನ ಸವಿದಿದ್ದಾರೆ. ಇವರ ಊಟದ ದೃಶ್ಯ ಕಂಡ ಕಾರ್ಯಕರ್ತರು ಕೂಡಾ ಆಶ್ಚರ್ಯಗೊಂಡಿದ್ದಾರೆ.

ಇದೇ ವೇಳೆ ಈ ವಿಷಯ ತಿಳಿದು ಸಾಮಾನ್ಯ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ನಡೆಯಲಿರುವ ಚುನಾವಣೆಯಲ್ಲೂ ಇದೇ ಸೌಹಾರ್ದತೆಯನ್ನು ಪಂಚಾಯತ್ ಸದಸ್ಯರು ಮುಂದುವರಿಸಲಿ ಎಂದು ಅವರು ಅಭಿಪ್ರಾಯಪಡುತ್ತಿದ್ದಾರೆ.

ಇದೇ ವೇಳೆ ನಾಲ್ವರು ಸದಸ್ಯರು ಈ ಭೋಜನ ಸತ್ಕಾರಕೂಟದಲ್ಲಿ ಭಾಗವಹಿಸಿಲ್ಲವೆಂದು ಹೇಳಲಾಗುತ್ತಿದೆ. ಲೀಗ್, ಬಿಜೆಪಿ, ಸಿಪಿಎಂ ಹಾಗೂ ಎಸ್‌ಡಿಪಿಐಯ ಒಬ್ಬೊಬ್ಬರು  ಸದಸ್ಯರು ಭೋಜನದಲ್ಲಿ  ಪಾಲ್ಗೊಂಡಿಲ್ಲವೆ ಲಾಗಿದೆ.

ಪಕ್ಷದ ಕಾರ್ಯಕರ್ತರು ಭ್ರಷ್ಟಾಚಾರ, ಪಕ್ಷಪಾತದ ವಿರುದ್ಧ ಹೋರಾಟ ನಡೆಸುತ್ತಿರುವಾಗ ಪಂಚಾಯತ್ ಸದಸ್ಯರು ಒಗ್ಗಟ್ಟಾಗಿ ಭೋಜನದಲ್ಲಿ ಪಾಲ್ಗೊಂಡಿರುವುದು ಆಶ್ಚರ್ಯಕರ ಎಂದು ಸಾಮಾನ್ಯ ಮತದಾರರು ತಿಳಿಸುತ್ತಿದ್ದಾರೆ.

ಶೀಘ್ರ ನಡೆಯಲಿರುವ ಪಂಚಾಯತ್ ಚುನಾವಣೆಯಲ್ಲಿ ಇವರ ಪರವಾಗಿ ಏನನ್ನು ತಿಳಿಸಿ ಮತಯಾಚಿಸಲು ಜನರ ಬಳಿಗೆ ಹೋಗುವುದೆಂದು ಪಕ್ಷಗಳ ಸಕ್ರಿಯ ಕಾರ್ಯಕರ್ತರು ಆಲೋಚಿ ಸುತ್ತಿದ್ದಾರೆ.

23 ಸದಸ್ಯರುಳ್ಳ ಕುಂಬಳೆ ಪಂಚಾಯತ್‌ನಲ್ಲಿ  ಆಡಳಿತ ನಡೆಸುವ ಲೀಗ್‌ಗೆ ಓರ್ವ ಸ್ವತಂತ್ರ ಸಹಿತ ಎಂಟು ಸದಸ್ಯರಿದ್ದಾರೆ. ಕಾಂಗ್ರೆಸ್‌ನ ಇಬ್ಬರು ಸದಸ್ಯರು ಹಾಗೂ ಓರ್ವ ಎಸ್‌ಡಿಪಿಐ ಸದಸ್ಯ ಆಡಳಿತ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಗೆ 9, ಸಿಪಿಎಂಗೆ ಇಬ್ಬರು ಸ್ವತಂತ್ರರ ಸಹಿತ ಮೂವರು ಸದಸ್ಯರಿದ್ದಾರೆ.

RELATED NEWS

You cannot copy contents of this page