ಶಬರಿಮಲೆ ಸಂರಕ್ಷಣಾ ಸಂಗಮಕ್ಕೆ ಚಾಲನೆ

ಪಂದಳಂ: ಪಂಪಾದಲ್ಲಿ ತಿರುವಿದಾಂಕೂರ್ ಮುಜರಾಯಿ ಮಂಡಳಿ ನೇತೃತ್ವದಲ್ಲಿ ಮೊನ್ನೆ ನಡೆದ ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮದ ಬೆನ್ನಲ್ಲೇ, ಶಬರಿಮಲೆ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಆಯೋಜಿಸಲಾದ ಶಬರಿಮಲೆ ಸಂರಕ್ಷಣಾ ಸಂಗಮ ಪಂದಳಂನಲ್ಲಿ ಇಂದು ಬೆಳಿಗ್ಗೆ ವಿದ್ಯುಕ್ತವಾಗಿ ಆರಂಭಗೊಂಡಿದೆ. ಸಹಸ್ರಾರು ಮಂದಿ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಪಂದಳಂ ನಾನಾಕ್ ಕನ್ವೆನ್ಶನ್ ಸೆಂಟರ್‌ನಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡ ಶಬರಿಮಲೆ ಸಂರಕ್ಷಣಾ ಕಾರ್ಯಕ್ರಮವನ್ನು ವಾಳೂರು ತೀರ್ಥಪಾದಾಶ್ರಮದ ಸ್ವಾಮೀಜಿ ಪ್ರಜ್ಞಾನಂದ ತೀರ್ಥಪಾದರು ಉದ್ಘಾಟಿಸಿದರು. ಶಬರಿಮಲೆ ಸಂರಕ್ಷಣಾ ಕ್ರಿಯಾ ಸಮಿತಿ ಅಧ್ಯಕ್ಷೆ ಕೆ.ಪಿ. ಶಶಿಕಲ ಟೀಚರ್ ಅಧ್ಯಕ್ಷತೆ ವಹಿಸಿದರು. ಪ್ರಧಾನ ಸಂಚಾಲಕ ಜೆ.ಆರ್. ಕುಮಾರ್ ದರ್ಶನ ರೂಪು ರೇಷೆ ಮಂಡಿಸಿದರು. ಶಬರಿಮಲೆಯ ನಂಬುಗೆ, ಶಬರಿಮಲೆಯ ಅಭಿವೃದ್ಧಿ ಮತ್ತು ಶಬರಿಮಲೆಯ ಸಂರಕ್ಷಣೆ ಎಂಬ ಮೂರು ವಿಷಗಳಲ್ಲಾಗಿ ಮೂರು ವಿಚಾರಗೋಷ್ಠಿಗಳು ನಡೆಯುತ್ತಿವೆ. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಸ್ಥಾಪಕ ಕಾರ್ಯದರ್ಶಿ ಸ್ವಾಮಿ ಅಯ್ಯಪ್ಪದಾಸ್, ತಿರುವಿದಾಂಕೂರು ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ನ್ಯಾ. ಜಿ. ರಾಮನ್ ನಾಯರ್ ಮತ್ತು ಪೊಲೀಸ್ ಇಲಾಖೆಯ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಟಿ.ಪಿ. ಸೇನ್ ಕುಮಾರ್ ಕ್ರಮವಾಗಿ ವಿಚಾರಗೋಷ್ಠಿಯಲ್ಲಿ ವಿಷಯ ಮಂಡಿಸಿದರು.

ಇಂದು ಮಧ್ಯಾಹ್ನ ೩ ಗಂಟೆಗೆ ಕುಳನಡ ಪಂಚಾಯತ್‌ನ ಕೈಪುಳದಲ್ಲಿರುವ ಶ್ರೀವತ್ಸ ಮೈದಾನದಲ್ಲಿ ಶಬರಿಮಲೆ ಸಂರಕ್ಷಣಾ ಸಂಗಮದ ಬಹಿರಂಗ ಅಧಿವೇಶನ ನಡೆಯಲಿದ್ದು, ಅದನ್ನು ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಣ್ಣಾ ಮಲೈ ಉದ್ಘಾಟಿಸುವರು. ಸ್ವಾಗತ ಸಂಘದ ಅಧ್ಯಕ್ಷ ಎನ್. ನಾರಾಯಣ ವರ್ಮ ಅಧ್ಯಕ್ಷತೆ ವಹಿಸುವರು. ಹಿಂದೂ ಐಕ್ಯವೇದಿಯ ರಾಜ್ಯ ಕಾರ್ಯದರ್ಶಿ ವತ್ಸನ್ ತಿಲ್ಲಂಗೇರಿ, ಪ್ರಧಾನ ಭಾಷಣಮಾಡುವರು. ಸ್ವಾಮಿ ಶಾಂತಾನಂದ ಮಹರ್ಷಿ, ಕರ್ನಾಟಕ ಸಂಸದ ತೇಜಸ್ವೀ ಸೂರ್ಯ, ಪ್ರಜ್ಞಾ ಪ್ರವಾಹಕ್ ರಾಷ್ಟ್ರೀಯ ಸಂಯೋಜಕ ಕೆ. ನಂದಕುಮಾರ್, ವಿ.ಹಿಂ.ಪ ರಾಜ್ಯ ಅಧ್ಯಕ್ಷ ವಿಜಿ ತಂಬಿ, ಶಬರಿಮಲೆ ಸಂರಕ್ಷಣಾ ಸಂಗಮದ ಪ್ರಧಾನ ಸಂಚಾಲಕ ಕೆ.ಪಿ. ಹರಿದಾಸ್ ಮತ್ತು ಸಂಚಾಲಕ ಎಸ್.ಜೆ.ಆರ್. ಕುಮಾರ್ ಮೊದಲಾದವರು ಭಾಗವಹಿಸಿ ಮಾತನಾಡುವರು.

You cannot copy contents of this page