ಶಬರಿಮಲೆ ಚಿನ್ನ ಕಳವು:ಮುಖ್ಯ ಆರೋಪಿ ಉಣ್ಣಿಕೃಷ್ಣನ್ ಪೋತ್ತಿ ಬಂಧನ: ಇಂದು ನ್ಯಾಯಾಲಯಕ್ಕೆ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕದ್ದ ಪ್ರಕರಣದ ಪ್ರಧಾನ ಸೂತ್ರಧಾರ ಹಾಗೂ ಒಂದನೇ ಆರೋ ಪಿಯಾಗಿರುವ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿಯನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಶಬರಿಮಲೆ ದೇಗುಲದ  ಗರ್ಭಗುಡಿ  ದ್ವಾರ ಮತ್ತು ದ್ವಾರಪಾಲಕ ಮೂರ್ತಿಗಳ ಚಿನ್ನ ಕದ್ದ ಆರೋಪದಂತೆ ಈತನನ್ನು  ಬಂಧಿಸಲಾಗಿದೆ. ನಂತರ ಈತನನ್ನು ವೈದ್ಯಕೀಯ ತಪಾಸಣೆಗಾಗಿ ಇಂದು ಬೆಳಿಗ್ಗೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಳಿಕ ಮಧ್ಯಾಹ್ನ ಆತನನ್ನು ಪತ್ತನಂತಿಟ್ಟದ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಪೋತ್ತಿ ವಿರುದ್ದ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ವಿಶೇಷ ತನಿಖಾ ತಂಡ ಈ ಪಕರಣದ ತನಿಖೆ ಕೈಗೆತ್ತಿಕೊಂಡ ಆರನೇ ದಿನದಂ ದೇ ಪೋತ್ತಿಯನ್ನು ಬಂಧಿಸಲಾಗಿದೆ. ತನಿಖೆಯಂಗವಾಗಿ ಉಣ್ಣಿಕೃಷ್ಣನ್‌ನನ್ನು  ತನಿಖಾ ತಂಡ ವಿಚಾರಿಸಿದಾಗ ಆತ ದೇವಸ್ವಂ ಮಂಡಳಿ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದು ಅದು ಮಂಡಳಿಯ ಇತರ ಹಲವು ಸಿಬ್ಬಂದಿಗಳು ಹಾಗೂ ಸದಸ್ಯರನ್ನು ಈ ಪ್ರಕರಣದಲ್ಲಿ ಸಿಲುಕಿಸುವಂತೆ ಮಾಡತೊಡಗಿದೆ.

 ಭಾರೀ ಒಳಸಂಚಿನ ಭಾಗವಾಗಿ ಶಬರಿಮಲೆ ದೇಗುಲದ ಚಿನ್ನ ಸಾಗಿಸ ಲಾಗಿದೆ. ಅದಕ್ಕಾಗಿ ನಾನು ಹಲವರಿಂದ ಹಣ ಪಡೆದಿದ್ದೇನೆ. ದೇವಸ್ವಂ ಮಂಡಳಿಯ ಅಧಿಕಾರಿಗಳ ಹೊರತಾಗಿ ಮಂಡಳಿಯ ಆಡಳಿತ ಸಮಿತಿಯೂ ನನಗೆ ಸಹಾಯವೊದಗಿಸಿದೆ. ಹೀಗೆ ನನಗೆ ಸಹಾಯವೊದಗಿಸಿದವರಿಗೆಲ್ಲಾ ನಾನು ಪ್ರತ್ಯುಪಕಾರ ಮಾಡಿದ್ದೆನೆಂಬ ಸ್ಫೋಟನಾತ್ಮಕ ಹೇಳಿಕೆಯನ್ನು ಪೋತ್ತಿ ನೀಡಿದ್ದು ಅದು ಈ ಪ್ರಕರಣವನ್ನು ಹೊಸ ತಿರುವಿನತ್ತ ಸಾಗಿಸತೊಡಗಿದೆ. ತನಿಖಾ ತಂಡ ಉಣ್ಣಿಕೃಷ್ಣನ್‌ನನ್ನು ಮೊನ್ನೆಯೇ ವಶಕ್ಕೆ ತೆಗೆದುಕೊಂಡಿತ್ತು. ನಂತರ ಸತತ ೧೦ ತಾಸುಗಳ ತನಕ ಆತನನ್ನು ವಿಚಾರಿಸಿ ಹೇಳಿಕೆ ದಾಖಲಿಸಲಾಗಿದೆ. ಕ್ರೈಂ ಬ್ರಾಂಚ್ ಎಸ್ಪಿ ಪಿ. ಬಿಜೋಯ್ ಮತ್ತು ಇನ್ನೋರ್ವ ಎಸ್ಪಿ ಶಶಿಧರರ ನೇತೃತ್ವದಲ್ಲಿ ಪ್ರತ್ಯೇಕವಾಗಿ ಆತನ ಹೇಳಿಕೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ೨.೩೦ರ ವೇಳೆ ತಮ್ಮ ಕಚೇರಿಗೆ ಕರೆತಂದು ಅಲ್ಲಿ ಆರೋಪಿಯ ಬಂಧನವನ್ನು ವಿದ್ಯುಕ್ತವಾಗಿ ದಾಖಲಿಸಲಾಗಿದೆ.

You cannot copy contents of this page