ಪಂದಳಂ: ಪಂದಳಂನಲ್ಲಿ ನಿನ್ನೆ ನಡೆದ ಶಬರಿಮಲೆ ಸಂರಕ್ಷಣಾ ಸಂಗಮದಲ್ಲಿ ಜನಸಾಗರವೇ ಹರಿದುಬಂದು ಅದೊಂದು ಮಹಾ ಉತ್ಸವವಾಗಿ ಮಾರ್ಪಟ್ಟಿತು. ದೇಶದ ಮೂಲೆಮೂಲೆಗಳಿಂದಲೂ ಭಕ್ತರು ಇದರಲ್ಲಿ ಪಾಲ್ಗೊಂಡರು. ಸಂಗಮದಂಗವಾಗಿ ಶಬರಿಮಲೆಯ ನಂಬುಗೆ, ಶಬರಿಮಲೆಯ ಅಭಿವೃದ್ಧಿ ಮತ್ತು ಶಬರಿಮಲೆಯ ಸಂರಕ್ಷಣೆ ಎಂಬೀ ಮೂರು ವಿಷಯಗಳಲ್ಲಾಗಿ ವಿಚಾರಗೋಷ್ಠಿಗಳನ್ನು ನಡೆಸಲಾಯಿತು. ಶಬರಿಮಲೆಯ ಆಚಾರ ಸಂರಕ್ಷಿಸುವುದೇ ಈ ಸಂಗಮದ ಪ್ರಧಾನ ಉದ್ದೇಶವಾಗಿದೆ. ಸಂಗಮದ ಕಾರ್ಯಕ್ರಮದುದ್ದಕ್ಕೂ ಶಬರಿಮಲೆ ಮತ್ತು ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಮಂತ್ರಘೋಷ ಮುಗಿಲು ಮುಟ್ಟಿ ಅಲ್ಲಿ ನೆರೆದವರನ್ನು ಭಕ್ತಿಸಾಗರದಲ್ಲಿ ತೇಲುವಂತೆ ಮಾಡಿತು.
ವಿಚಾರಗೋಷ್ಠಿಯ ಬಳಿಕ ಪಂದಳಂ ನಾನಕ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದ ಅಯ್ಯಪ್ಪ ಸಂರಕ್ಷಣಾ ಸಂಗಮ ಕಾರ್ಯಕ್ರಮವನ್ನು ವಾಳೂರು ತೀರ್ಥಾನಂದ ಸ್ವಾಮೀಜಿ ಪ್ರಜ್ಞಾನಂದ ತೀರ್ಥರು ದೀಪ ಬೆಳಗಿಸಿ ಉದ್ಘಾಟಿಸಿದರು. ಶಬರಿಮಲೆ ಅಯ್ಯಪ್ಪ ಸಂರಕ್ಷಣಾ ಕ್ರಿಯಾ ಸಮಿತಿ ಅಧ್ಯಕ್ಷೆ ಕೆ.ಪಿ. ಶಶಿಕಲಾ ಅಧ್ಯಕ್ಷತೆ ವಹಿಸಿದರು. ಅಪರಾಹ್ನ ಕೈಪುಳ ಶ್ರೀವತ್ಸ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ ಉದ್ಘಾಟಿಸಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಾಸ್ತಿಕರಾದ ಓರ್ವ ನಾಟಕಗಾರರೆಂದು ಅವರು ಆರೋಪಿಸಿದರು.
2018ರಲ್ಲಿ ಅಯ್ಯಪ್ಪ ಭಕ್ತರ ಮೇಲೆ ಕ್ರೂರ ದೌರ್ಜನ್ಯವೆಸಗಿದ್ದ ಮುಜರಾಯಿ ಮಂಡಳಿ ನೇತೃತ್ವದಲ್ಲಿ ಪಂಪಾದಲ್ಲಿ ಸರಕಾರ ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮ ನಡೆಸಿದೆ. ಶಬರಿಮಲೆಗೆ ಯುವತಿಯರ ಪ್ರವೇಶವನ್ನು ವಿರೋಧಿಸಿ ನಾಮಜಪ ಹೆಸರಲ್ಲಿ ಹೋರಾಟ ನಡೆಸಿದ ಅಯ್ಯಪ್ಪ ಭಕ್ತರ ವಿರುದ್ಧ ಅಂದು ದಾಖಲಿಸಲಾಗಿದ್ದ ಕೇಸುಗಳನ್ನು ಹಿಂಪಡೆಯದೆ ಕೇರಳ ಸರಕಾರ ಮತ್ತು ಮುಜರಾಯಿ ಮಂಡಳಿ ಈ ಜಾಗತಿಕ ಅಯ್ಯಪ್ಪ ಸಂಗಮ ನಡೆಸಿತ್ತು. ಅಯ್ಯಪ್ಪ ಭಕ್ತರಿಗೆ ಏನನ್ನಾದರೂ ಸಹಾಯ ಮಾಡಬೇ ಕೆಂದು ಮುಖ್ಯಮಂತ್ರಿಯವರಿಗೆ ತೋರುತ್ತಿದ್ದಲ್ಲಿ, ಅವರು ಮೊದಲು ಶಬರಿಮಲೆಗೆ ಯುವತಿಯರ ಪ್ರವೇಶದ ಪರ ಸರಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅಫಿದಾವಿತ್‌ನ್ನು ಹಿಂತೆಗೆದುಕೊಳ್ಳಬೇಕಾಗಿತ್ತು ಎಂದೂ ಅಣ್ಣಾಮಲೈ ಹೇಳಿದರು. ಪಂದಳಂ ಅರಮನೆಯ ನಿರ್ವಾಹಕ ಸಮಿತಿ ಸದಸ್ಯ ನಾರಾಯಣ ವರ್ಮ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಸಂಸದ ತೇಜಸ್ವಿ ಸೂರ್ಯ ಪ್ರಧಾನ ಭಾಷಣ ಮಾಡಿದರು. ಕೆ.ಪಿ. ಶಶಿಕಲಾ ಟೀಚರ್, ಎನ್.ಜಿ.ಆರ್. ಕುಮಾರ್, ನ್ಯಾಯವಾದಿ ಅನಿಲ್ ಎಂ, ವಿಳಯಿಲ್ ಸ್ವಾಮಿ ಶಿವಾನಂದ ಮಹರ್ಷಿ, ವಿಜಿ ತಂಬಿ, ಕೆ.ಪಿ. ಹರಿದಾಸ್ ಮೊದಲಾದವರು ಭಾಗವಹಿಸಿದರು.