ತಿರುವನಂತಪುರ: ಶಬರಿಮಲೆ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಕವಚಗಳ ಚಿನ್ನ ನಾಪತ್ತೆಯಾದ ಪ್ರಕರಣ ತನಿಖೆಗಾಗಿ ಹೈಕೋರ್ಟ್ ನೀಡಿದ ನಿರ್ದೇಶ ಪ್ರಕಾರ ರಚಿಸಲಾದ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ದಿಂದ ತನಿಖೆ ಆರಂಭಿಸಲಿದೆ. ಎಡಿಜಿಪಿ ಎಚ್. ವೆಂಕಟೇಶ್‌ರಿಗೆ ತನಿಖೆಯ ಮೇಲ್ವಿಚಾರಣೆ ವಹಿಸಿಕೊಡಲಾಗಿದೆ. ಶಬರಿಮಲೆ ದೇಗುಲದ ಚಿನ್ನ ನಾಪತ್ತೆಯಾದ ಬಗ್ಗೆ ತನಿಖೆ ನಡೆಸಿದ ತಿರುವಿದಾಂಕೂರ್ ಮುಜುರಾಯಿ ಮಂಡಳಿಯ ವಿಜಿಲೆನ್ಸ್ ಆಂಡ್ ಸೆಕ್ಯುರಿಟಿ ಅಧಿಕಾರಿ ಹೈಕೋರ್ಟ್‌ಗೆ ನಿನ್ನೆ ವರದಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎ. ರಾಜಾ ವಿಜಯ್ ರಾಘವನ್ ಮತ್ತು ನ್ಯಾಯಮೂರ್ತಿ ಕೆ.ವಿ. ವಿಜಯ್ ಕುಮಾರ್ ಒಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಬಳಿಕ ನೀಡಿದ ನಿರ್ದೇಶ ಪ್ರಕಾರ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ರೂಪು ನೀಡಲಾ ಗಿದೆ. ಇದರಂತೆ ಹೈಕೋರ್ಟ್‌ನ ಮೇಲ್ನೋಟದಲ್ಲಿ ಹಾಗೂ ಎಡಿಜಿಪಿ ಎಚ್. ವೆಂಕಟೇಶ್‌ರ ಮೇಲ್ವಿಚಾರಣೆ ಯಲ್ಲಿ ಎಸ್‌ಪಿ ಎನ್. ಶಶಿಧರನ್ ಅವರ ನೇತೃತ್ವದ ತಂಡ ಈ ಪ್ರಕರಣದ ತನಿಖೆ ನಡೆಸಲಿದೆ.
ಚಿನ್ನ ನಾಪತ್ತೆಯಾದ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡಕ್ಕೆ ರೂಪು ನೀಡಿದ ಹೈಕೋರ್ಟ್‌ನ ತೀರ್ಮಾನವನ್ನು ರಾಜ್ಯ ಮುಜರಾಯಿ ಖಾತೆ ಸಚಿವ ವಿ.ಎನ್. ವಾಸವನ್ ಸ್ವಾಗತಿಸಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ ಎಂದು ಅವರು ಹೇಳಿದ್ದಾರೆ. ಮುಜರಾಯಿ ಮಂಡಳಿಯ ವಿಜಿಲೆನ್ಸ್ ಅಧಿಕಾರಿ ಸಲ್ಲಿಸಿದ ವರದಿ ಯನ್ನು ಪರಿಶೀಲಿಸಿದ ಹೈಕೋರ್ಟ್‌ನ ವಿಭಾಗೀಯ ಪೀಠ, ಮೇಲ್ನೋಟಕ್ಕೆ ಪ್ರಕರಣದಲ್ಲಿ ಅಪರಾಧ ಕೃತ್ಯಗಳು ನಡೆದಿದೆ ಎಂಬುವುದು ಸ್ಪಷ್ಟಗೊಳ್ಳುತ್ತಿದೆ. ಆದ್ದರಿಂದ ತಪ್ಪೆಸಗಿದ ಎಲ್ಲರನ್ನೂ ಕಾನೂನಿನ ಮುಂದೆ ತರಬೇಕಾಗಿದೆ.
ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳಿಗೆ ಚಿನ್ನದ ಲೇಪನ ನಡೆಸಿದ ಚೆನ್ನೈ ಸ್ಮಾರ್ಟ್ ಕ್ರಿಯೇಶನ್ ಮಾತ್ರವಲ್ಲ, ಮುಜುರಾಯಿ ಮಂಡಳಿಯ ಸಿಬ್ಬಂದಿಗಳೂ ಇದಕ್ಕೆ ಹೊಣೆಗಾರರಾಗಿದ್ದಾರೆ. 2019ರಲ್ಲಿ ಚಿನ್ನಲೇಪಿತ ದ್ವಾರಪಾಲಕ ಕವಚಗಳನ್ನು ಹಿಂತಿರುಗಿ ಪಡೆದ ವೇಳೆ ಅದನ್ನು ಮುಜರಾಯಿ ಮಂಡಳಿಯವರು ಪರಿಶೀಲಿಸದೇ ಇರುವುದು ದಂಗುಪಡಿಸುವ ವಿಷಯವಾಗಿದೆ. 1998-99ರಲ್ಲಿ ಚಿನ್ನ ಲೇಪನಗೊಳಿಸಿದ ದ್ವಾರಪಾಲಕ ಮೂರ್ತಿಗಳ ಕವಚದಲ್ಲಿ ಆ ಬಳಿಕ ಚಿನ್ನದ ತೂಕ ಕಡಿಮೆಗೊಂಡಿದ್ದು ಮುಜರಾಯಿ ಮಂಡಳಿಯ ಪೂರ್ಣ ಅರಿವಿನೊಂದಿಗೆ ಆಗಿತ್ತು ಎಂಬುದೂ ಸ್ಪಷ್ಟಗೊಳ್ಳುತ್ತಿದೆ ಎಂದೂ ಹೈಕೋರ್ಟ್ ಹೇಳಿದೆ.







