ಬೆಂಗಳೂರು: ವಿಜಯಪುರ ಜಿಲ್ಲೆಯ ಮನಗುಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ನೆನಪಿಂದ ಮಾಸುವ ಮೊದಲೇ ಮತ್ತೊಂದು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಕಳವು ನಡೆಸಲಾಗಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಿಂದ ದರೋಡೆ ನಡೆಸಲಾಗಿದೆ. ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರ ತೋರಿಸಿ ಬ್ಯಾಂಕ್‌ನ ಮೆನೇಜರ್, ಕ್ಯಾಶಿಯರ್, ಸಿಬ್ಬಂದಿಯ ಕೈಕಾಲುಗಳನ್ನು ಕಟ್ಟಿಹಾಕಿ ದರೋಡೆ ನಡೆಸಲಾಗಿದೆ. ಮುಸುಕುದಾರಿಗಳಾದ ಐದು ಮಂದಿಯ ತಂಡ ನುಗ್ಗಿ ದರೋಡೆ ನಡೆಸಿದ್ದು, ಬ್ಯಾಂಕ್‌ನಿಂದ ಸುಮಾರು 8 ಕೋಟಿ ರೂ., 50 ಕೆಜಿಗೂ ಅಧಿಕ ಚಿನ್ನಾಭರಣ ದರೋಡೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪೊಲೀಸರು ಬ್ಯಾಂಕ್‌ನ ಸಿಸಿ ಕ್ಯಾಮರಾ ಮತ್ತು ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರವನ್ನು ಸಂಪರ್ಕಿಸುವ ಹಾಗೂ ಚಡಚಣದ ಇತರ ರಸ್ತೆಗಳಲ್ಲಿ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ. ಬ್ಯಾಂಕ್‌ನಲ್ಲಿ ಚಿನ್ನಾಭರಣ ಇಟ್ಟ ಗ್ರಾಹಕರಿಗೆ ಆತಂಕ ಎದುರಾಗಿದ್ದು ನಿನ್ನೆ ರಾತ್ರಿಯೇ ಜನರು ಎಸ್‌ಬಿಐ ಬ್ಯಾಂಕ್‌ನ ಬಳಿ ಸೇರಿದ್ದರು. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಮಂಗಳವೇಡ ತಾಲೂಕಿನ ಹುಲಿಜಂತಿ ಮಾರ್ಗವಾಗಿ ಕಳ್ಳರು ಪರಾರಿಯಾಗಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
