ರಸ್ತೆಯಲ್ಲಿದ್ದ ಕಾಡುಕೋಣವನ್ನು ತಪ್ಪಿಸಿ ಸಂಚರಿಸಿದಾಗ ಸ್ಕೂಟರ್ ಅಪಘಾತ: ಸವಾರನ ವಿರುದ್ಧ ಕೇಸು

ಮುಳ್ಳೇರಿಯ: ರಸ್ತೆಯಲ್ಲಿದ್ದ ಕಾಡುಕೋಣವನ್ನು ತಪ್ಪಿಸಲು ಯತ್ನಿಸಿದಾಗ ಸ್ಕೂಟರ್ ಮಗುಚಿ ಬಿದ್ದು ನರ್ಸಿಂಗ್ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆಗೆ ಸಂಬಂಧಿಸಿ ಸ್ಕೂಟರ್ ಸವಾರನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕರಿವೇಡಗಂ ತಂಗತ್ತಡ್ಕ ನಿವಾಸಿ ಅಮಲ್‌ರಾಜ್ ವಿರುದ್ಧ ಕೇಸು ದಾಖಲಿಸಲಾಗಿದೆ. ಕಳೆದ ತಿಂಗಳ 21ರಂದು ಮುಂಜಾನೆ ಇರಿಯಣ್ಣಿ-ಬೋವಿಕ್ಕಾನ ರಸ್ತೆಯ ಮಂಜಕ್ಕಲ್ಲು ಎಂಬಲ್ಲಿ ಅಪಘಾತವುಂ ಟಾಗಿತ್ತು. ಇದರಿಂದ ಕರಿವೇಡಗಂ ತಂಗತ್ತಡ್ಕ ನಿವಾಸಿ ವಿ.ಆರ್. ಜಿತಿನ (19) ಗಾಯಗೊಂಡಿದ್ದರು. ಕಾಡುಕೋಣ ರಸ್ತೆಯಲ್ಲಿ ಅಡ್ಡದಾಟುತ್ತಿದ್ದಂತೆ ಅಜಾಗ್ರತೆಯಿಂದ ಸ್ಕೂಟರ್ ಚಲಾಯಿಸಿರುವುದರಿಂದ ಅಪಘಾತವುಂಟಾಗಿರುವುದಾಗಿ ಜಿತಿನ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಅಪಘಾತದಲ್ಲಿ ಗಾಯಗೊಂಡು ಒಂದು ತಿಂಗಳಕಾಲ ಜಿತಿನ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು.  ಅಪಘಾತ ಸಂಬಂಧಿಸಿ ಪೊಲೀಸರು ವಿದ್ಯಾರ್ಥಿನಿಯ ಮನೆಗೆ ತಲುಪಿ ಹೇಳಿಕೆ ದಾಖಲಿಸಿಕೊಂಡಿದ್ದರು. ಬಿಎನ್‌ಎಸ್ ಪ್ರಕಾರ ೨೮೧, ೧೨೫(ಎ) ಕಾಯ್ದೆ ಪ್ರಕಾರ ಕೇಸು ದಾಖಲಿಸಲಾಗಿದೆ. ಕಾಡುಕೋಣ ಸ್ಕೂಟರ್‌ಗೆ ಢಿಕ್ಕಿ ಹೊಡೆದಿರುವುದಾಗಿ ಘಟನೆ ದಿನದಂದು ಹೇಳಲಾಗಿತ್ತು.  ಸ್ಕೂಟರ್ ಚಲಾಯಿಸಿದ ಅಮಲ್‌ರಾಜ್ ಕೂಡಾ ಗಾಯಗೊಂಡಿದ್ದರು. ಮಂಗಳೂರಿನಲ್ಲಿ ಕಲಿಯುವ ವಿದ್ಯಾರ್ಥಿನಿಯನ್ನು ಸ್ಕೂಟರ್‌ನಲ್ಲಿ ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದಾಗ ಅಪಘಾತವುಂಟಾಗಿತ್ತು.

RELATED NEWS

You cannot copy contents of this page