ಉಪ್ಪಳ: ಸ್ಕೂಟರ್-ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮಂಗಲ್ಪಾಡಿ ಪ್ರತಾಪನಗರ ತಿಂಬರ ನಿವಾಸಿ ನಾರಾಯಣ ಆಚಾರ್ಯರ ಪುತ್ರ ನವೀನ್ ಆಚಾರ್ಯ (50) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಬಡಗಿ ವೃತ್ತಿ ನಡೆಸುತ್ತಿದ್ದರು. ಶನಿವಾರ ಸಂಜೆ ಕೆಲಸ ಮುಗಿಸಿ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಆರಿಕ್ಕಾಡಿ ಸಮೀಪದ ಹೆದ್ದಾರಿಯಲ್ಲ್ಲಿ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆ ದಿದೆ. ಇದರಿಂದ ಗಂಭೀರ ಗಾಯ ಗೊಂಡ ಅವರನ್ನು ಸ್ಥಳೀಯರು ಕುಂಬಳೆ ಆಸ್ಪತ್ರೆಗೆ ಸಾಗಿಸಿ, ಬಳಿಕ ಮಂಗಳೂರಿಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಅಪಘಾತ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತನಾಗಿದ್ದ ನವೀನ್ ಆಚಾರ್ಯ ಪ್ರತಾಪಗರ ಶ್ರೀ ಗೌರೀ ಗಣೇಶ ಮಂದಿರ, ಶ್ರೀ ಗಾಯತ್ರಿ ವಿಶ್ವಕರ್ಮ ಮಂದಿರದಲ್ಲಿ ಸಕ್ರಿಯರಾಗಿ ದ್ದರು. ವಿವಿಧೆಡೆಗಳಲ್ಲಿ ನಿರಂತರ ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಳ್ಳುತ್ತಿದ್ದರು.
ಮೃತರು ತಂದೆ, ಪತ್ನಿ ಜ್ಯೋತಿ ಮಕ್ಕಳಾದ ಮಾನಸ, ಹರ್ಷಕಿರಣ್, ಸಹೋದರ-ಸಹೋದರಿಯರಾದ ಪ್ರಕಾಶ, ದಿನೇಶ, ಹರೀಶ, ಚಂದ್ರು, ಶಾಂತ, ವೀಣಾ, ವಿದ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ತಾಯಿ ರುಕ್ಮಿಣಿ ಈ ಹಿಂದೆ ನಿಧನರಾಗಿದ್ದಾರೆ.
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪುಳಿಕುತ್ತಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮನೆಗೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರ ಸಹಿತ ನೂರಾರು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.