ಕುಂಬಳೆ: ಪೇರಾಲ್ ಪೊಟ್ಟೋರಿಯಲ್ಲಿ ಅನಧಿಕೃತವಾಗಿ ಮಣ್ಣು ತೆಗೆಯುತ್ತಿರುವುದಕ್ಕೆ ಪೊಲೀಸರು ತಡೆಯೊಡ್ಡಿ ಜೆಸಿಬಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಕುರಿತಾಗಿ ಸಮಗ್ರ ವರದಿಯನ್ನು ಜಿಯೋಲಜಿ ಇಲಾಖೆಗೆ ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಟ್ಟೋರಿಯಲ್ಲಿ ವ್ಯಕ್ತಿಯೊಬ್ಬನ ಮಾಲಕತ್ವದಲ್ಲಿರುವ ಸ್ಥಳದಿಂದ ಭಾರೀ ಪ್ರಮಾಣದಲ್ಲಿ ಮಣ್ಣು ತೆಗೆದು ಕೊಂಡೊಯ್ಯಲಾಗುತ್ತಿದೆಯೆಂಬ ಮಾಹಿತಿಯಂತೆ ಎಸ್‌ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದೆ. ಪೊಲೀಸರನ್ನು ಕಂಡೊಡನೆ ಟಿಪ್ಪರ್ ಲಾರಿಗಳಲ್ಲಿ ಚಾಲಕರು ಪರಾರಿಯಾಗಿದ್ದಾರೆ. ಮಣ್ಣು ತೆಗೆಯುತ್ತಿದ್ದ ಜೆಸಿಬಿಯ ಆಪರೇಟರ್‌ನೊಂದಿಗೆ ದಾಖಲೆಗಳನ್ನು ಕೇಳಿದಾಗ ಸರಿಯಾದ ಮಾಹಿತಿ ಲಭಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಸಂಶಯಗೊಂಡ ಪೊಲೀಸರು ಜೆಸಿಬಿಯ ನಂಬರ್ ಪ್ಲೇಟ್ ಪರಿಶೀಲಿಸಿದಾಗ ಅದು ನಕಲಿಯೆಂದು ತಿಳಿದುಬಂದಿದೆ. ಬೇರೆ ಯಾರದ್ದೋ ಹೆಸರಿನಲ್ಲಿರುವ ಸ್ಕೂಟರ್‌ನ ನಂಬ್ರವನ್ನು ಜೆಸಿಬಿಗೆ ಅಳವಡಿಸಲಾಗಿದೆಯೆಂದು ತಿಳಿದುಬಂದಿದೆ. ಈ ಕುರಿತಾಗಿ ತನಿಖೆ ಮುಂದುವರಿಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.







