ಕಾಸರಗೋಡು: ಟಿಪ್ಪರ್ ಲಾರಿ ಕಾರಿಗೆ ಢಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ದಾರುಣವಾಗಿ ಸಾವನ್ನಪ್ಪಿ, ಕಾರು ಚಲಾಯಿಸುತ್ತಿದ್ದ ಇನ್ನೋರ್ವ ಪೊಲೀಸ್ ಗಾಯಗೊಂಡ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿವೈಎಸ್ಪಿ ನೇತೃತ್ವದ ಮಾದಕದ್ರವ್ಯ ಪತ್ತೆ ಕಾರ್ಯಾಚರಣೆಯ ಘಟಕವಾದ ಡೆನ್ಸೆಫ್ ಸ್ಕ್ವಾಡ್ನ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಚೆರ್ವತ್ತೂರು ಸಮೀಪದ ಕಾರ್ಯಾಂಗೋಡು ಮೈಯಿಚ್ಚ ನಿವಾಸಿ ಸಜೇಶ್ ಕೆ.ಕೆ (40) ಸಾವನ್ನಪ್ಪಿದ ದುರ್ದೈವಿ. ಕಾರು ಚಲಾಯಿಸುತ್ತಿದ್ದ ಅದೇ ಸ್ಕ್ವಾಡ್ನ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸುಭಾಶ್ಚಂದ್ರನ್ (35) ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.
ಚೆಂಗಳ ನಾಲ್ಕನೇ ಮೈಲಿನ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪ್ಯಾಸೇಜ್ನಲ್ಲಿ ಇಂದು ನಸುಕಿನಜಾವ ೨.೪೫ರ ವೇಳೆ ಈ ದುರ್ಘಟನೆ ನಡೆದಿದೆ. ಕರ್ತವ್ಯ ನಿಮಿತ್ತ ಸಜೇಶ್ ಮತ್ತು ಸುಭಾಶ್ಚಂದ್ರನ್ ಕಾರಿನಲ್ಲಿ ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್ನಿಂದ ಇಂದು ಮುಂಜಾನೆ ಚಟ್ಟಂಚಾಲ್ಗೆ ಹೋಗುತ್ತಿದ್ದ ವೇಳೆ ನಾಲ್ಕನೇ ಮೈಲು ಅಂಡರ್ ಪ್ಯಾಸೇಜ್ನಲ್ಲಿ ಎದುರುಗಡೆ ಯಿಂದ ಬರುತ್ತಿದ್ದ ಟಿಪ್ಪರ್ ಲಾರಿ ಕಾರಿಗೆ ಢಿಕ್ಕಿ ಹೊಡೆದಿತ್ತು. ಅದರಿಂದ ಗಾಯಗೊಂಡ ಸಜೇಶ್ ಮತ್ತು ಸುಭಾಶ್ಚಂದ್ರನ್ರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಸಜೇಶ್ರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಈ ಘಟನೆ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ಢಿಕ್ಕಿ ಹೊಡೆದ ಟಿಪ್ಪರ್ ಲಾರಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಮೈಯಿಚ್ಚದ ದಿ| ಜಾನಕಿಯವರ ಪುತ್ರನಾಗಿರುವ ಸಜೇಶ್ ಪತ್ನಿ ಶೈನಿ, ಮಕ್ಕಳಾದ ದಿಯಾ, ದೇವಜನ್, ಸಹೋದರರಾದ ಜಯೇಶ್ ಮತ್ತು ಪ್ರಜೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.