ಕಾಸರಗೋಡು: ನಾಲ್ಕೂವರೆ ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಫಾಸ್ಟ್‌ಟ್ರಾಕ್ ಸ್ಪೆಷಲ್ (ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶರಾದ ರಾಮು ರಮೇಶ್ಚಂದ್ರಭಾನುರವರು ಜೀವಾವಧಿ ಸಜೆ ಮತ್ತು 3 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಕೊಲ್ಲಂ ಕಾರಿಚ್ಚಿರದ ಎಸ್. ರಾಜೀವನ್ (55) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಹೆಚ್ಚುವರಿ ಕಠಿಣ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
೨೦೨೨ ಆಗಸ್ಟ್ ತಿಂಗಳಲ್ಲಿ ನಾಲ್ಕೂವರೆ ವರ್ಷ ಪ್ರಾಯದ ಬಾಲಕಿಗೆ ತಿನ್ನಲು ಮಾವಿನ ಹಣ್ಣು ನೀಡುವೆನೆಂದು ಹೇಳಿ ಪುಸಲಾಯಿಸಿ ಆರೋಪಿ ವಾಸಿಸುತ್ತಿದ್ದ ಮಾನ್ಯದ ಬಾಡಿಗೆ ಕ್ವಾರ್ಟರ್ಸ್‌ಗೆ ಆಕೆಯನ್ನು ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ಬದಿಯಡ್ಕ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ಅಶ್ವಂತ್ ಎಸ್. ಕಿರಣ್ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಷನ್ ಪರ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಎ.ಕೆ. ಪ್ರಿಯ ನ್ಯಾಯಾಲಯದಲ್ಲಿ ವಾದಿಸಿದ್ದರು.





