ಕಾಸರಗೋಡು: ಕಾಸರಗೋಡು ನಗರಸಭೆಯ ನೂತನ ಅಧ್ಯಕ್ಷೆಯಾಗಿ ಮುಸ್ಲಿಂ ಲೀಗ್ ನ ಶಾಹಿನಾ ಸಲೀಂ ಆಯ್ಕೆಗೊಂಡಿದ್ದಾರೆ. ೪೦ರ ಹರೆಯದ ಶಾಹಿನಾ ಎಂಬಿಎ ಪದವೀಧರೆಯಾಗಿದ್ದು ೨೦೧೫ರಲ್ಲಿ ಚೆಂಗಳ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಹತ್ತು ವರ್ಷಗಳ ಹಿಂದೆ ಇವರು ಚೆಂಗಳ ಪಂಚಾಯತ್‌ನ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಇವರ ತಂದೆ ಕಲ್ಲೆಟ್ರಾ ಅಬ್ದುಲ್ ಖಾದರ್ ನೆರೆಯ ಚೆಮ್ನಾಡ್ ಪಂಚಾಯತ್ ಅಧ್ಯಕ್ಷರಾಗಿದ್ದರು. ಕಾಸರಗೋಡು ನಗರಸಭೆಯ ಅಧ್ಯಕ್ಷ ಸ್ಥಾನ ವಹಿಸುತ್ತಿರುವ ಎರಡನೇ ಮಹಿಳೆಯಾಗಿದ್ದಾರೆ. 2005-10 ಮತ್ತು 2015-20ರ ಅವಧಿಯಲ್ಲಿ ಬೀಫಾತಿಮ್ಮ ಇಬ್ರಾಹಿಂ ಕಾಸರಗೋಡು ನಗರಸಭೆಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಕಾಸರಗೋಡು ನಗರಸಭೆಯ 16ನೇ ವಾರ್ಡ್ ಆಗಿರುವ ತುರ್ತಿಯಿಂದ ಶಾಹಿನಾ ಸಲೀಂ ಗೆಲುವು ಸಾಧಿಸಿ ನಗರಸಭಾ ಅಧ್ಯಕ್ಷೆ ಸ್ಥಾನಕ್ಕೇರಿದ್ದಾರೆ.
ಮೂಲತಃ ಮೇಲ್ಪರಂಬ ನಿವಾಸಿಯಾಗಿರುವ ಇವರು ಈಗ ವಿದ್ಯಾನಗರ ಓಷಿಯಾನೆಸ್ ಹಾರ್ಮನಿನ ಪ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಚೆಮ್ನಾಡ್ ಗ್ರಾಂ ಪಂಚಾಯತ್ ಅಧ್ಯಕ್ಷೆಯಾಗಿದ್ದ ಕಲ್ಲೆಟ್ರ ಅಬ್ದುಲ್ ಖಾದರ್-ತಾಹಿರಾ ದಂಪತಿ ಪುತ್ರಿಯಾಗಿರುವ ಶಾಹಿನಾ ಸಲೀಂ ವನಿತಾ ಲೀಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕುಟುಂಬಶ್ರೀ ಉದ್ಯೋಗ ಖಾತರಿ ಫೆಡರೇಶನ್‌ನ (ಎಸ್‌ಟಿಯು) ಜಿಲ್ಲಾಧ್ಯಕ್ಷೆಯಾಗಿದ್ದಾರೆ. ಇವರ ಪತಿ ಸಿ. ಸಲೀಂ, ಪಿಡಬ್ಲ್ಯುಡಿ ಗುತ್ತಿಗೆದಾರರಾಗಿದ್ದು ಇವರಿಗೆ ಶಾನ್‌ಸ ಮತ್ತು ಶಿಮಾಸ್ ಎಂಬಿಬ್ಬರು ಮಕ್ಕಳಿದ್ದಾರೆ.
ನಿನ್ನೆ ನಡೆದ ಚುನಾವಣೆಯಲ್ಲಿ ಶಾಹಿನಾ ಸಲೀಂ 24 ಮತ ಪಡೆದು ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡರು. ಇವರ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ ಬಿಜೆಪಿ ಶಾರದಾರಿಗೆ 12 ಮತಗಳು ಲಭಿಸಿವೆ. ಸಿಪಿಎನ ಇಬ್ಬರು ಹಾಗೂ ಓರ್ವ ಪಕ್ಷೇತರ ಕೌನ್ಸಿಲರ್ ಮತದಾನದಿಂದ ಹಿಂದಕ್ಕೆ ಸರಿದಿದ್ದರು. ಕಾಸರಗೋಡು ನಗರಸಭೆಯಲ್ಲಿ ಒಟ್ಟು 39 ಸದಸ್ಯರ ಬಲ ಹೊಂದಿದೆ. ನಗರಸಭೆಯ ಮುಸ್ಲಿಂ ಲೀಗ್ ಉಪಾಧ್ಯಕ್ಷರಾಗಿ ಕೆ.ಎಂ. ಹನೀಫ ಆಯ್ಕೆಗೊಂಡರು. ಇವರಿಬ್ಬರು ನಿನ್ನೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು.







