ಕೆಂಪು ಕಲ್ಲಿಗೆ ಕ್ಷಾಮ: ಕ್ರಮಕ್ಕೆ ಆಗ್ರಹಿಸಿ ಯೂತ್ ಲೀಗ್ ಮನವಿ

ಕುಂಬಳೆ: ಮಂಜೇಶ್ವರ ತಾಲೂಕಿನ ವಿವಿಧ ಭಾಗಗಳಿಂದ ಮಣ್ಣು, ಕೆಂಪು ಕಲ್ಲು ಸಹಿತದ ಪ್ರಕೃತಿ ಸಂಪನ್ಮೂಲಗಳನ್ನು ಅನಧಿಕೃತವಾಗಿ ಕರ್ನಾಟಕಕ್ಕೆ ಹಾಗೂ ಇತರ ನೆರೆಯ ರಾಜ್ಯಗಳಿಗೆ ಸಾಗಿಸುತ್ತಿರುವುದು ಮುಂದುವರಿಯುತ್ತಿದೆ ಎಂದು ಆರೋಪಿಸಿ ಮುಸ್ಲಿಂಯೂತ್ ಲೀಗ್ ಕುಂಬಳೆ ಪಂಚಾಯತ್ ಸಮಿತಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು. ಕೊಯಿಪ್ಪಾಡಿ, ಪುತ್ತಿಗೆ, ಬಾಯಾರು ವಿಲ್ಲೇಜ್‌ಗಳ ಅನಂತರಪುರ, ಪಾದೆಕಲ್ಲು, ಪೈವಳಿಕೆ ಮೊದಲಾದ ಪ್ರದೇಶಗಳಿಂದ ಕಳೆದ ೫ ವರ್ಷಗಳಿಂದ ಬೃಹತ್ ಟೋರಸ್ ವಾಹನಗಳಲ್ಲಿ ಹಗಲು ರಾತ್ರಿ ಎನ್ನದೆ  ಸಾಗಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಂಜೇಶ್ವರ ತಾಲೂಕಿನ ವಿವಿಧ ಭಾಗಗಳಲ್ಲಿ ಅನಧಿಕೃತ ಕೆಂಪುಕಲ್ಲು ಕೋರೆಗಳ ಚಟುವಟಿಕೆ ವ್ಯಾಪಕವಾಗಿದೆ ಎಂದು ಯೂತ್ ಲೀಗ್ ಆರೋಪಿಸಿದೆ. ಕರ್ನಾಟಕದಲ್ಲಿ ಕೆಂಪುಕಲ್ಲಿಗೆ ಭಾರೀ ಬೆಲೆ ಲಭಿಸುತ್ತಿರುವುದರಿಂದಾಗಿ ವ್ಯಾಪಕ ಸಾಗಾಟ ನಡೆಯುತ್ತಿದ್ದು, ಇದು ಊರಿನಲ್ಲಿ ಕೆಂಪು ಕಲ್ಲು ಕ್ಷಾಮಕ್ಕೆ ಹಾಗೂ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಇದರಿಂದಾಗಿ ನಿರ್ಮಾಣ ವಲಯ ಸ್ತಂಭನಾವಸ್ಥೆಯಲ್ಲಿದೆ. ಜನಸಾಮಾನ್ಯರಿಗೆ ಮನೆ ನಿರ್ಮಿಸಲು ಸಾಧ್ಯವಾಗದ ಸ್ಥಿತಿ ಈಗ ಇದೆ. ಉದ್ಯೋಗಿಗಳ ಹಾಗೂ ರಾಜಕೀಯದವರ ಒತ್ತಾಸೆಯಿಂದ ಈ ರೀತಿಯ ಚಟುವಟಿಕೆಗಳು ನಡೆಯು ತ್ತಿದ್ದು, ದೂರುದಾರರ ಮಾಹಿತಿಯನ್ನು ಕೂಡಾ ಉದ್ಯೋಗಸ್ಥರು ಮಾಫಿಯಾಗಳಿಗೆ ನೀಡುತ್ತಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಗ್ಗೆ ದೂರು ನೀಡಿದ್ದರೂ ಕಂದಾಯ, ಮೈನಿಂಗ್ ಆಂಡ್ ಜಿಯೋಲಜಿ, ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಂದು ಯೂತ್ ಲೀಗ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ತುರ್ತು ಮಧ್ಯಪ್ರವೇಶ ನಡೆಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ, ಸಚಿವರಿಗೆ, ವಿವಿಧ ಇಲಾಖೆ ಅಧಿಕಾರಿ ಗಳಿಗೆ, ಜಿಲ್ಲಾಧಿಕಾರಿಗೆ ಯೂತ್ ಲೀಗ್ ಮನವಿ ದ್ವಿತೀಯ ಬಾರಿಗೆ ನೀಡಿದೆ.

You cannot copy contents of this page