ಕಾಸರಗೋಡು: ರಾಜ್ಯದಲ್ಲಿ ಮತದಾರ ಯಾದಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಕರಡು ಮತದಾರ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ವಿದ್ಯುಕ್ತವಾಗಿ ಪ್ರಕಟಿಸಿದ್ದು, ಇದರಲ್ಲಿ ಕಾಸರಗೋಡು ಜಿಲ್ಲೆಯ ಮತದಾರ ಪಟ್ಟಿಯಿಂದ ೫೬,೯೧೧ ಮಂದಿ ಹೊರಬಿದ್ದಿದ್ದಾರೆ. ಮತದಾರ ಯಾದಿಯಲ್ಲಿ 10,21,345 ಮಂದಿ (ಶೇ. 94.72) ಉಳಿದುಕೊಂಡಿದ್ದಾರೆ. ಕರಡು ಮತದಾರ ಯಾದಿಯಿಂದ ಹೊರಬಿದ್ದವರಲ್ಲಿ ನಿಧನಹೊಂದಿರುವ 18,386 ಮಂದಿ, ಪತ್ತೆಹಚ್ಚಲು ಸಾಧ್ಯವಾಗದ 13,689 ಮಂದಿ, ಖಾಯಂ ಆಗಿ ಬೇರೆಡೆಗೆ ವಾಸ್ತವ್ಯ ಬದಲಾಯಿಸಿದ 20,459 ಮಂದಿ, ಎರಡು ಕಡೆಗಳ ಮತದಾರ ಯಾದಿಯಲ್ಲಿ ಹೆಸರು ಹೊಂದಿರುವ 2571 ಮಂದಿ ಹಾಗೂ ಇತರ ವಿಭಾಗಗಳ 1806 ಮಂದಿ ಒಳಗೊಂ ಡಿದ್ದಾರೆ. ಇದು ಜಿಲ್ಲೆಯ ಒಟ್ಟು ಮತದಾರರ ಶೇ. 2.84 ಮಾತ್ರವೇ ಆಗಿದೆ. ರಾಜ್ಯದಲ್ಲಿ ಕರಡು ಮತದಾರ ಪಟ್ಟಿಯಿಂದ ಅತೀ ಕಡಿಮೆ ಮಂದಿ ಹೊರಬಿದ್ದಿರುವುದು ಕಾಸರಗೋಡು ಜಿಲ್ಲೆಯಲ್ಲಾಗಿದೆ.
ಕರಡು ಮತದಾರ ಪಟ್ಟಿಯಲ್ಲಿ ಹೆಸರು ಒಳಪಡದವರು ಹೆಸರು ಸೇರ್ಪಡೆಗೊಳಿಸಲು ಜನವರಿ ೨೨ರ ತನಕ ಚುನಾವಣಾ ಆಯೋಗ ಸಮಯಾ ವಕಾಶ ನೀಡಿದೆಯೆಂದು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ತಿಳಿಸಿದ್ದಾರೆ. ಅದೆಲ್ಲವನ್ನು ಪರಿಶೀಲಿಸಿ ಫೆಬ್ರವರಿ ೨೧ರಂದು ಅಂತಿಮ ಮತದಾರ ಪಟ್ಟಿಯನ್ನು ಪ್ರಕಟಿಸಲಾಗುವುದು.
ಕರಡು ಮತದಾರ ಪಟ್ಟಿಯ ಪ್ರತಿಗಳನ್ನು ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನಿನ್ನೆ ಜಿಲ್ಲಾಧಿಕಾರಿ ಹಸ್ತಾಂತರಿಸಿದರ. ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆಗಳ ಸಂಖ್ಯೆ 983ರಿಂದ ಈಗ 1141ಕ್ಕೇರಿದ. ಅಂದರೆ ಜಿಲ್ಲೆಯಲ್ಲಿ ಮತಗಟ್ಟೆಗಳ ಸಂಖ್ಯೆ ಈಗ 158ರಷ್ಟು ಹೆಚ್ಚಳ ಉಂಟಾಗಿದೆ.
ಕರಡು ಮತದಾರ ಯಾದಿಯಿಂದ ರಾಜ್ಯದಲ್ಲಿ ಒಟ್ಟಾರೆಯಾಗಿ 24,08,503 (ಶೇ. 8.65) ಮಂದಿ ಹೊರಬಿದ್ದಿದ್ದಾರೆ. 1,30,58,731 ಮಹಿಳೆಯರು, 1,23,83,341 ಪುರುಷರು ಹಾಗೂ 280 ಮಂಗಳಮುಖಿಯರು ಸೇರಿ ಒಟ್ಟು 2,54,42,352 ಮಂದಿ ಅಂತಿಮ ಕರಡು ಮತದಾರ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ. ಕರಡು ಮತದಾರ ಪಟ್ಟಿಯಿಂದ ಹೊರಬಿದ್ದವರಲ್ಲಿ ನಿಧನಹೊಂದಿದ 6,49,885 ಪತ್ತೆಹಚ್ಚಲು ಸಾಧ್ಯವಾಗದ 6,45,548 ಮಂದಿ, ಬೇರೆಡೆಗೆ ವಾಸ್ತವ್ಯ ಬದಲಾಯಿಸಿದ 8,16,221, ಇಮ್ಮಡಿ ಮತ ಹೊಂದಿದ 1,36,029 ಮತ್ತು ಎಸ್‌ಐಆರ್ ನೊಂದಿಗೆ ಸಹಕರಿಸಲು ತಯಾರಾಗದ 1,60,830 ಮಂದಿ ಒಳಗೊಂಡಿದ್ದಾರೆ.







