ತಿರುವನಂತಪುರ: ಕೇರಳದಲ್ಲಿ ಮತದಾರ ಯಾದಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರಿಂಕೋರ್ಟ್ ನೋಟೀಸ್ ಜ್ಯಾರಿಗೊಳಿಸಿದೆ.
ಕೇರಳದಲ್ಲ್ಲಿ ಎಸ್‌ಐಆರ್ ಕ್ರಮವನ್ನು ಪ್ರಶ್ನಿಸಿ ಹಾಗೂ ಅದರ ವಿರುದ್ಧ ಕೇರಳ ಸರಕಾರ, ಸಿಪಿಎಂ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಅವುಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಸೂರ್ಯಕಾಂತ್‌ರ ನೇತೃತ್ವದ ಸುಪ್ರಿಂಕೋರ್ಟ್‌ನ ಪೀಠ ಕೊನೆಗೆ ಆ ವಿಷಯದಲ್ಲಿ ಚುನಾವಣಾ ಆಯೋಗಕ್ಕೆ ನೋಟೀಸ್ ಜ್ಯಾರಿಗೊಳಿಸಿದೆ. ಮಾತ್ರವಲ್ಲ ಅರ್ಜಿಗಳ ಮೇಲಿನ ಮುಂದಿನ ವಾದಗಳ ಆಲಿಸುವಿಕೆಯನ್ನು ನ್ಯಾಯಾಲಯ ಈ ತಿಂಗಳ ೨೬ಕ್ಕೆ ಮುಂದೂಡಿದೆ.
ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣಾ ಕ್ರಮಗಳು ಈಗ ಪ್ರಗತಿಯ ಹಂತದಲ್ಲಿದೆ. ಆದ್ದರಿಂದ ಈ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸುವಂತೆ ಅರ್ಜಿದಾರರ ಪರ ವಾದಿಸಿದ ವಕೀಲರುಗಳು ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ನ. ೨೬ರಂದು ಪರಿಶೀಲಿಸಲು ನ್ಯಾಯಾಲಯ ಕೊನೆಗೆ ಮುಂದಾಯಿತು.
ಕೇರಳದ ಹೊರತಾಗಿ, ಉತ್ತರ ಪ್ರದೇಶ ಸೇರಿದಂತೆ ಇತರ ಹಲವು ರಾಜ್ಯಗಳು ಎಸ್‌ಐಆರ್ ವಿರುದ್ಧ ಅರ್ಜಿ ಸಲ್ಲಿಸಿದ್ದು, ಅವುಗಳನ್ನೂ ಕೇರಳದ ಅರ್ಜಿಗಳ ಜೊತೆ ಪರಿಗಣಿಸಬೇಕೆಂಬ ಬೇಡಿಕೆಯನ್ನು ಅಂಗೀಕರಿಸಲು ಸುಪ್ರಿಂಕೋರ್ಟ್ ತಯಾರಾಗಲಿಲ್ಲ. ಕೇರಳದ ಹೊರತಾಗಿರುವ ಇತರ ರಾಜ್ಯಗಳ ಅರ್ಜಿಗಳನ್ನು ಡಿಸೆಂಬರ್‌ನಲ್ಲಿ ಪರಿಶೀಲಿಸಲಾಗುವುದೆಂದು ನ್ಯಾಯಾಲಯ ತಿಳಿಸಿದೆ.
ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣಾ ಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ತ್ವರಿತವಾಗಿ ಪರಿಶೀಲಿಸುವಂತೆ ಕೇರಳ ಸರಕಾರ ತನ್ನ ಅರ್ಜಿಯಲ್ಲಿ ವಿನಂತಿಸಿಕೊಂಡಿತ್ತಾದರೂ, ಎಸ್‌ಐಆರ್‌ಗೆ ತಡೆಯಾಜ್ಞೆ ನೀಡಬೇಕೆಂಬ ಬೇಡಿಕೆ ಮುಂದಿರಿಸಲಿಲ್ಲ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆ ಮತ್ತು ಎಸ್‌ಐಆರ್ ಕ್ರಮವನ್ನು ಜತೆಗೆ ನಡೆಸುವಂತಿಲ್ಲ. ಹಾಗೆ ನಡೆದಲ್ಲಿ ಅದು ಚುನಾವಣಾ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಕೇರಳ ಸರಕಾರ ಸಲ್ಲಿಸಿದ ಅರ್ಜಿಯಲ್ಲಿ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.







