ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ ವಿರುದ್ಧ ಪ್ರತಿಭಟನೆ ನಡೆಸಿದ ಜನಪರ ಮುಷ್ಕರ ಸಮಿತಿ ಪದಾಧಿಕಾರಿಗಳಾದ ಆರು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಎ.ಕೆ. ಆರಿಫ್, ಅಶ್ರಫ್ ಕಾರ್ಳೆ, ಸಿ.ಎ ಸುಬೈರ್, ಅನ್ವರ್ ಆರಿಕ್ಕಾಡಿ, ಲಕ್ಷ್ಮಣ ಪ್ರಭು, ನಾಸರ್ ಮೊಗ್ರಾಲ್ ಎಂಬಿವರ ವಿರುದ್ದ ಕೇಸು ದಾಖಲಿಸಿ ಬಂಧಿಸಲಾಗಿದೆ. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ ಇವರಿಗೆ ಕಾರ್ಯಕರ್ತರು ಮೆರವಣಿಗೆ ಮೂಲಕ ಸ್ವಾಗತ ನೀಡಿದರು. ನಿನ್ನೆ ಮಧ್ಯಾಹ್ನ 1 ಗಂಟೆಗೆ ಟೋಲ್ ಬೂತ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಈ ವೇಳೆ ಅಲ್ಲಿಗೆ ತಲುಪಿದ ಮುಷ್ಕರ ಸಮಿತಿ ಪದಾಧಿಕಾರಿಗಳು ಕಾಮಗಾರಿಗೆ ತಡೆಯೊಡ್ಡಿದ್ದರು. ಇದರಿಂದ ಕೆಲಸ ನಿಲ್ಲಿಸಿ ಅಪರಾಹ್ನ 3.30ರ ವೇಳೆ ಮತ್ತೆ ಪೊಲೀಸರ ಕಾವಲಿನಲ್ಲಿ ಕೆಲಸ ಆರಂಭಿಸಲಾಗಿತ್ತು. ಈ ವೇಳೆಯೂ ಅಲ್ಲಿಗೆ ತಲುಪಿದ ಮುಷ್ಕರ ಸಮಿತಿ ಪದಾಧಿಕಾರಿಗಳು ಕಾಮಗಾರಿಗೆ ತಡೆಯೊಡ್ಡಿದ್ದಾರೆ.
ಇದೇ ವೇಳೆ ಟೋಲ್ ಬೂತ್ ಕಾಮಗಾರಿ ನಿಲುಗಡೆಗೊಳಿಸಲು ಜಿಲ್ಲಾಧಿಕಾರಿ ಲಿಖಿತವಾಗಿ ನಿರ್ದೇಶಿಸಿದರೆ ಕೆಲಸ ನಿಲ್ಲಿಸುವುದಾಗಿ ಕೇಂದ್ರ ರಸ್ತೆ ವಿಭಾಗ ಹಾಗೂ ಗುತ್ತಿಗೆ ಕಂಪೆನಿ ಪ್ರತಿನಿಧಿಗಳು ತಿಳಿಸಿದ್ದಾರೆ. ಟೋಲ್‌ಗೆ ಸಂಬಂಧಿಸಿದ ಹೈವೇ ಅಥೋರಿಟಿ ನಿರ್ದೇಶಕ್ಕೆ ವಿರುದ್ಧವಾಗಿ ಕುಂಬಳೆ ಆರಿಕ್ಕಾಡಿಯಲ್ಲಿ ಟೋಲ್ ಬೂತ್ ನಿರ್ಮಿಸುವುದಾಗಿ ಮುಷ್ಕರ ಸಮಿತಿಯ ಹಾಗೂ ಇತರರ ದೂರುಗಳನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದರ ವಿರುದ್ಧ ಮುಷ್ಕ ರ ಸಮಿತಿ ವಿಭಾಗೀಯ ಪೀಠಕ್ಕೆ ದೂರು ಸಲ್ಲಿಸಿರುವುದಾಗಿಯೂ ಅದರಲ್ಲಿ ನಿರ್ಧಾರವಾಗುವವರೆಗೆ ಕಾಮಗಾರಿ ನಿಲುಗಡೆಗೊಳಿಸ ಬೇಕೆಂದು ಮುಷ್ಕರ ಸಮಿತಿ ಅಧಿಕಾರಿಗಳೊಂದಿಗೆ ಆಗ್ರಹಪಟ್ಟಿದೆ.