ಕಾಸರಗೋಡು: ದೈಹಿಕ ಸಾಮರ್ಥ್ಯ ಪರೀಕ್ಷೆಯ ವೇಳೆ ಕಾಸರಗೋಡು ನಿವಾಸಿಯಾದ ಭಾರತೀಯ ಸೇನಾ ಜವಾನ ದಿಢೀರ್ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ವೆಳ್ಳರಿಕುಂಡ್ ಪನ್ನಿತ್ತಡ ನಿವಾಸಿ ಅರುಣ್‌ರಾಮಕೃಷ್ಣನ್ (38) ಸಾವನ್ನಪ್ಪಿದ ಯುವಕ. ದೆಹಲಿಯಲ್ಲ್ಲಿರುವ ಭಾರತೀಯ ಸೇನೆಯ ಪ್ರಧಾನ ಕಚೇರಿಯಲ್ಲಿ ಸಿಗ್ನಲ್ ರೆಜಿಮೆಂಟ್ ಹವಲ್ದಾರ್ ಆಗಿ ಸೇವೆ ಸಲ್ಲಸುತ್ತಿದ್ದ ಅರುಣ್ ರಾಮಕೃಷ್ಣನ್ ಅಲ್ಲಿ ಬೆಳಿಗ್ಗೆ ಬೆಟಾಲಿಯನ್ ಫಿಸಿಕಲ್ ಎಲಿಜಿಬಿಲಿಟಿ ಟೆಸ್ಟ್ ಬಿಪಿಇಟಿ (ದೈಹಿಕ ಸಾಮರ್ಥ್ಯ ಪರೀಕ್ಷೆ) ಗೊಳಪಡುತ್ತಿದ್ದ ವೇಳೆ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಅಷ್ಟರೊಳಗೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಅರುಣ್ ರಾಮಕೃಷ್ಣನ್ ರಜೆಯಲ್ಲಿ ತಿಂಗಳುಗಳ ಹಿಂದೆಯಷ್ಟೇ ಊರಿಗೆ ಬಂದು ಹಿಂತಿರುಗಿದ್ದರು.
ಮೃತರು ತಂದೆ ರಾಮಕೃಷ್ಣನ್,ತಾಯಿ ಪಿ.ತಂಗಮಣಿ, ಪತ್ನಿ ಶರಣ್ಯಾ, ಸಹೋದರರಾದ ಆನಂದ್, ಅರವಿಂದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಊರಿಗೆ ತಂದು ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.