ತಿರುವನಂತಪುರ: ಮಾವನನ್ನು ಅಳಿಯ ಹೊಡೆದು ಕೊಂದ ಘಟನೆ ನಡೆದಿದೆ. ಕುಡಪ್ಪನಕುನ್ನು ನಿವಾಸಿ ಸುಧಾಕರನ್ ಕೊಲೆಗೀಡಾದವರು. ಈತನ ಅಳಿಯ ರಾಜೇಶ್ ಆಕ್ರಮಣ ನಡೆಸಿದ್ದಾನೆ. ಹಲವಾರು ಪ್ರಕರಣಗಳಲ್ಲಿ ಆರೋಪಿಯಾದ ರಾಜೇಶ್‌ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಸುಧಾಕರ ಹಾಗೂ ರಾಜೇಶ್ ಒಂದೇ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ರಾತ್ರಿ ಕೊಲೆ ನಡೆಸಲಾಗಿದೆ. ಮದ್ಯಪಾನ ಗೈದು ಬರುತ್ತಿದ್ದ ರಾಜೇಶ್ ದಿನವೂ ಮಾವನ ಜೊತೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದನೆನ್ನಲಾಗಿದೆ. ನಿನ್ನೆ ರಾತ್ರಿಯೂ ಕುಡಿದು ಬಂದು ಮಾವನಲ್ಲಿ ಜಗಳ ನಡೆಸಿದ್ದು, ಕ್ರೂರವಾಗಿ ಹಲ್ಲೆಗೈದಿದ್ದಾನೆ. ಈ ಬಗ್ಗೆ ಪೊಲೀಸರಿಗೆ ನೆರೆಮನೆ ನಿವಾಸಿಗಳು ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ ಸಾವು ಸಂಭವಿಸಿದೆ.
ಇಂದು ಬೆಳಿಗ್ಗೆ ರಾಜೇಶ್ ಮನೆಯಿಂದ ಹೊರಗೆ ಬಂದ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ತಲುಪಿದ್ದು, ಈ ವೇಳೆ ರಾಜೇಶ್ ಪರಾರಿಯಾಗಿದ್ದನು. ಪೊಲೀಸರು ಬೆನ್ನಟ್ಟಿ ಮಣ್ಣಂತಲದಿಂದ ಬಂಧಿಸಿದ್ದಾರೆ.