ಆಲಪ್ಪುಳ: ಆಲಪ್ಪುಳದಲ್ಲಿ ಪುತ್ರ ತಂದೆ ಹಾಗೂ ತಾಯಿಯನ್ನು ಕೊಲೆಗೈದಿರುವುದು ವಿವಾಹ ನಡೆಸದ ದ್ವೇಷದಿಂದವೆಂದು ಹೇಳಿಕೆ ನೀಡಿದ್ದಾನೆ. ಆಲಪ್ಪುಳ ಒಪಿ ಪಾಲಂ ಕೊಮ್ಮಾಡಿ ಸಮೀಪ ವಾಸಿಸುವ ಮನ್ನತ್ ವಾರ್ಡ್ ಪನವೇಲಿಪುರ ಇಡತ್ತಿಲ್ ತಂಗರಾಜು ಹಾಗೂ ಆಗ್ನೇಸ್‌ರನ್ನು ಗುರುವಾರ ರಾತ್ರಿ 9 ಗಂಟೆ ವೇಳೆಗೆ ಪುತ್ರ ಬಾಬು ಇರಿದು ಕೊಲೆಗೈದಿದ್ದನು. ತರಕಾರಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲಿ ಬಾಬುವಿಗೆ ಓರ್ವೆ ಯುವತಿಯೊಂದಿಗೆ ಸಂಪರ್ಕವಿತ್ತೆನ್ನಲಾಗಿದೆ. ಇವರಿಬ್ಬರ ವಿವಾಹ ಮಾಡಿಕೊಡಬೇಕೆಂದು ಆಗ್ರಹಿಸಿದ್ದರೂ ತಾಯಿ ಇದನ್ನು ವಿರೋಧಿಸಿದರು. ಇದರಿಂದಾಗಿ ಅವರಲ್ಲಿ ತೀವ್ರ ದ್ವೇಷ ಉಂಟಾಯಿತೆಂದು ಆರೋಪಿ ಹೇಳಿಕೆ ನೀಡಿದ್ದಾನೆ. ಇತರ ಯುವತಿಯೊಂದಿಗೆ ವಿವಾಹ ನಡೆಸಿಕೊಡುವರೆಂದು ನಿರೀಕ್ಷಿಸಿದ್ದರೂ ಅದು ಸಫಲವಾಗಲಿಲ್ಲ ಎಂದು ವಿಚಾರಣೆ ವೇಳೆ ಪೊಲೀಸರಲ್ಲಿ ಬಾಬು ತಿಳಿಸಿದ್ದಾನೆ.
ಮದ್ಯಪಾನಗೈದು ಮನೆಯಲ್ಲಿ ಗಲಾಟೆ ಎಬ್ಬಿಸುವುದು ಬಾಬುವಿನ ನಿತ್ಯ ಹವ್ಯಾಸವಾಗಿತ್ತು. ಮದ್ಯಪಾನಗೈಯ್ಯಲು ಹಣ ಆಗ್ರಹಿಸಿ ಜಗಳ ಮಾಡುತ್ತಿದ್ದನೆನ್ನಲಾಗಿದೆ. ಆಲಪ್ಪುಳ ನೋರ್ತ್ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ತಾಯಿ ದೂರು ನೀಡಿದ್ದರು. ಗುರುವಾರ ಮದ್ಯಪಾನಗೈದು ಮನೆಯಲ್ಲಿ ಗಲಾಟೆ ಎಬ್ಬಿಸಿದ ಬಾಬು 100 ರೂ. ಆಗ್ರಹಿಸಿದರೂ ತಂದೆ ತಾಯಿ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಆತ ಮೊದಲಿಗೆ ತಾಯಿಯನ್ನು ಬಳಿಕ ತಂದೆಯನ್ನು ಇರಿದು ಕೊಂದಿದ್ದಾನೆ. ಬಳಿಕ ಮೃತದೇಹವನ್ನು ತೊಡೆಯಲ್ಲಿಟ್ಟು ಅಳುವ ನಾಟಕವಾಡಿ ಸಹೋದರಿ ಹಾಗೂ ನೆರೆಮನೆಯವರಿಗೆ ತಿಳಿಸಿರುವುದಾಗಿಯೂ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ಇದೇ ವೇಳೆ ಕೊಲೆಗೈದ ಬಳಿಕ ಪರಾರಿಯಾಗಲು ಯತ್ನಿಸಿದ ಬಾಬುವನ್ನು ಬಾರ್‌ನಿಂದ ಪೊಲೀಸರು ಸೆರೆ ಹಿಡಿದಿದ್ದಾರೆ. ಕೊಲೆಗೈಯ್ಯಲು ಉಪಯೋಗಿಸಿದ ಕತ್ತಿಯನ್ನು ಮನೆಯಿಂದ ಪೊಲೀ ಸರು ಪತ್ತೆಹಚ್ಚಿದ್ದಾರೆ. ಆರೋಪಿಗೆ ರಿಮಾಂಡ್ ವಿಧಿಸಲಾಗಿದೆ.