ಕುಂಬಳೆ ಟೋಲ್ ಬೂತ್‌ನಲ್ಲಿ ಸ್ಪೋಟ್ ಟೋಲ್ ಸಂಗ್ರಹ ನಿಲುಗಡೆ: ಯುಡಿಎಫ್‌ನಿಂದ ಇಂದು ಸಂಜೆ ಪೊಲೀಸ್ ಠಾಣೆಗೆ ಮಾರ್ಚ್

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಸಾದಲ್ಲಿ  ಸ್ಪೋಟ್ ಟೋಲ್ ಸಂಗ್ರಹವನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಲಾಗಿದೆ. ನಿನ್ನೆ ರಾತ್ರಿ ನಡೆದ ಅಹಿತಕರ ಘಟನೆಗಳು ಹಾಗೂ  ರಾತ್ರಿ ಕ್ರಿಯಾ ಸಮಿತಿ ಪದಾಧಿಕಾರಿ ಗಳು ಟೋಲ್ ಬೂತ್‌ಗೆ ತಲುಪಿ ನೀಡಿದ ತಾಕೀತನ್ನು ಪರಿಗಣಿಸಿ ಟೋಲ್ ಸಂಗ್ರಹವನ್ನು ನಿಲ್ಲಿಸಲಾಗಿದೆ. ಇದೇ ವೇಳೆ ಫಾಸ್ಟ್ ಟ್ಯಾಗ್ ಮೂಲಕದ ಟೋಲ್ ಸಂಗ್ರಹ ಮುಂದುವರಿಯುತ್ತಿದೆ. ಟೋಲ್ ಸಂಗ್ರಹ ವಿರುದ್ದ ಕ್ರಿಯಾ ಸಮಿತಿ ನೀಡಿದ ಅರ್ಜಿ ಪರಿಗಣಿಸುವುದನ್ನು ಹೈಕೋರ್ಟ್ ನಿನ್ನೆ ಮುಂದೂಡಿತ್ತು. ರಾಷ್ಟ್ರೀಯ ಹೆದ್ದಾರಿಯ ನ್ಯಾಯವಾದಿ ಹಾಜರಾಗದ ಹಿನ್ನೆಲೆಯಲ್ಲಿ  ಅರ್ಜಿ ಪರಿಗಣಿಸುವು ದನ್ನು ಮುಂದಿನ ತಿಂಗಳ 11ಕ್ಕೆ ಮುಂದೂಡಲಾಗಿದೆ. ಇದರ ಬೆನ್ನಲ್ಲೇ ನಿನ್ನೆ ಸಂಜೆ ವೇಳೆಗೆ ಟೋಲ್ ಸಂಗ್ರಹ ಆರಂಭಿಸಲಾಗಿದೆ. ಇದು ಭಾರೀ ಪ್ರತಿಭಟನೆ ಹಾಗೂ ನಾಟಕೀಯ ವಿದ್ಯಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಪೊಲೀಸರು ಮಧ್ಯಸ್ಥಿಕೆ ವಹಿಸಿ ಸಂಘರ್ಷಾವಸ್ಥೆಯನ್ನು ಹೊರತುಪಡಿಸಿ ದ್ದಾರೆ. ರಾತ್ರಿ 9 ಗಂಟೆ ವೇಳೆ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಸಿ.ಎ. ಸುಬೈರ್, ಎ.ಕೆ. ಆರಿಫ್, ಅಶ್ರಫ್ ಕಾರ್ಳೆ, ಲಕ್ಷ್ಮಣ ಪ್ರಭು, ತಾಜುದ್ದೀನ್ ಮೊಗ್ರಾಲ್ ಮೊದಲಾದವರು ಟೋಲ್ ಪ್ಲಾಸಾಕ್ಕೆ ತಲುಪಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಅರ್ಜಿಯ ಮೇಲೆ ಹೈಕೋರ್ಟ್ ತೀರ್ಪು ಕಲ್ಪಿಸುವವರೆಗೆ ಟೋಲ್ ಸಂಗ್ರಹ ನಡೆಸಿದರೆ ಅದನ್ನು ತಡೆಯುವುದಾಗಿ ಕ್ರಿಯಾಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಟೋಲ್ ಬೂತ್ ನೌಕರರೊಂದಿಗೆ ವಾಗ್ವಾದವೂ ಉಂಟಾಯಿತು.  ಇದನ್ನೆಲ್ಲಾ ಪರಿಗಣಿಸಿ ಸ್ಪೋಟ್ ಟೋಲ್ ಸಂಗ್ರಹವನ್ನು ನಿಲ್ಲಿಸಲಾಗಿದೆ. ಇದೇ ವೇಳೆ ನಿನ್ನೆ ಸಂಜೆ ೫.೫೦ರ ವೇಳೆ ಮಂಗಳೂರು ಭಾಗದಿಂದ ಕುಟುಂಬ ಸಹಿತ ಸಂಚರಿಸುತ್ತಿದ್ದ ಕಾರು ಟೋಲ್ ಬೂತ್‌ಗೆ ತಲುಪಿದಾಗ ಟೋಲ್ ಗೇಟ್‌ನ ರಾಡ್ ಕಾರಿನ ಮೇಲೆ ಬಿದ್ದು ಹಾನಿಯುಂಟಾಯಿ ತೆನ್ನಲಾಗಿದೆ.  ಕಾರಿಗೆ ಉಂಟಾದ ಹಾನಿಗೆ ನಷ್ಟ ಪರಿಹಾರ ನೀಡಬೇಕೆಂದು  ಚಾಲಕ ಒತ್ತಾಯಿಸಿದ್ದಾರೆ.  ಇದರಿಂದ ಕಾರು ಚಾಲಕ ಹಾಗೂ ಟೋಲ್ ಬೂತ್‌ನ ಸಿಬ್ಬಂದಿಗಳ ಮಧ್ಯೆ ವಾಗ್ವಾದವುಂಟಾಯಿತು. ಈ ವೇಳೆ ತಲುಪಿದ ಪೊಲೀಸರು ಕಾರು ಚಾಲಕನನ್ನು ಬಲಪ್ರಯೋಗಿಸಿ  ಕಾರಿನಿಂದಿಳಿಸಿ ಕಾರನ್ನು ದೂಡಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು ಇದರಿಂದ ಪುಟ್ಟ ಮಕ್ಕಳ ಸಹಿತ ಕುಟುಂಬ ದೀರ್ಘಹೊತ್ತು ಕಾರಿನಲ್ಲೇ ಉಳಿಯಬೇಕಾದ ಸ್ಥಿತಿ ಉಂಟಾಯಿತು. ಈ ಘಟನೆಗೆ ಸಂಬಂಧಿಸಿ  ಪೊಲೀಸರು ಅನುಸರಿಸಿದ ಕ್ರಮವನ್ನು ಪ್ರತಿಭಟಿಸಿ ಯುಡಿಎಫ್ ಮಂಜೇಶ್ವರ ಮಂಡಲ ಕಮಿಟಿ ನೇತೃತ್ವದಲ್ಲಿ ಇಂದು ಸಂಜೆ 4 ಗಂಟೆಗೆ ಕುಂಬಳೆ ಪೊಲೀಸ್ ಠಾಣೆಗೆ ಪ್ರತಿಭಟನೆ ನಡೆಸುವುದಾಗಿ ನೇತಾರರು ತಿಳಿಸಿದ್ದಾರೆ. ಟೋಲ್ ಪ್ಲಾಸ್ ಪರಿಸರದಿಂದ ಮೆರವಣಿಗೆ ಹೊರಟು  ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುವುದಾಗಿ ನೇತಾರರು ತಿಳಿಸಿದ್ದಾರೆ.

You cannot copy contents of this page