ಮಂಜೇಶ್ವರ: ಕೇರಳ ಸರಕಾರ ಮಂಡಿಸಿ ಅಂಗೀಕರಿಸಿದ ಮಲೆಯಾಳಂ ಭಾಷಾ ಮಸೂದೆಯ ವಿರುದ್ಧ ಕರ್ನಾಟಕ ಮುಖ್ಯಮಂತ್ರಿ ಹಾಗೂ ಸಚಿವರು ಹೇಳಿಕೆ ನೀಡುತ್ತಿರುವುದು ಖಂಡನೀಯವೆಂದು, ಇದು ಕೇರಳ ವಿರೋಧಿ ಧೋರಣೆಗೆ ಉದಾಹರಣೆಯಾಗಿದೆಯೆಂದು ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ.ಆರ್. ಜಯಾನಂದ ಆರೋಪಿಸಿದ್ದಾರೆ. ವರ್ಷಗಳ ಹಿಂದೆ ಮಂಡಿಸಿ ಅಂಗೀಕರಿಸಿದ ಮಲೆಯಾಳಂ ಭಾಷಾ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕದೆ ಮರಳಿಸಿದ್ದರು. ಆ ಬಳಿಕ ಪರಿಷ್ಕೃತ ಮಸೂದೆಯಲ್ಲಿ ಕೇರಳದ ಮತ್ತು ತಮಿಳುಭಾಷಾ ಅಲ್ಪಸಂಖ್ಯಾತರಿಗೆ ಅವರವರ ಮಾತೃಭಾಷೆಯಲ್ಲಿ ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಮಲೆಯಾಳಂ ಕಲಿಯಲು ಆಸಕ್ತಿಯಿದ್ದರೆ ಅದಕ್ಕೂ ಅವಕಾಶವಿದೆ. ಈ ಮಸೂದೆಯ ಮರೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ಕಸಿಯುತ್ತಿಲ್ಲ ಬದಲಾಗಿ ಸಂರಕ್ಷಿಸುತ್ತಿದೆಯೆಂದು ಜಯಾನಂದ ತಿಳಿಸಿದ್ದಾರೆ. ಇದನ್ನು ತಿಳಿಯದೆ ಕರ್ನಾಟಕದ ಮುಖ್ಯಮಂತ್ರಿ, ಸಚಿವರು ಬಹಿರಂಗ ಹೇಳಿಕೆ ನೀಡುತ್ತಿರುವುದು ಅಸಮಂಜಸವಾಗಿದೆಯೆಂದು ಅವರು ತಿಳಿಸಿದ್ದಾರೆ. ಭಾಷಾ ಮಸೂದೆಯ ಸೆಕ್ಷನ್ 6/1ರಲ್ಲಿ ಕೇರಳ ಸರಕಾರಿ, ಅನುದಾನಿತ ಶಾಲೆಗಳಲ್ಲಿ 10ನೇ ತರಗತಿವರೆಗೆ ಮಲೆಯಾಳಂ ಕಡ್ಡಾಯ ಮೊದಲ ಭಾಷೆಯಾಗಿದೆ. ಸೆಕ್ಷನ್ 6/3ರಲ್ಲಿ ಮಾತೃಭಾಷೆ ಮಲೆಯಾಳಂ ಹೊರತಾಗಿ ಯಾವುದೇ ಭಾಷೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಭಾಷೆಯ ಜೊತೆಗೆ ಮಲೆಯಾಳಂ ಎರಡನೇ ಪಠ್ಯವಾಗಿ ಅಧ್ಯಯನ ಮಾಡುವ ಅವಕಾಶ ನೀಡಲಾಗಿದೆ. ಕೇರಳದಲ್ಲಿ ತಮಿಳು ಮತ್ತು ಕನ್ನಡ ಭಾಷೆ ಅಲ್ಪಸಂಖ್ಯಾತರು ಎಂಬ ಘೋಷಣೆ ಮಾಡಲಾದ ಪ್ರದೇಶಗಳಲ್ಲಿ ರಾಜ್ಯ ಸರಕಾರದ ಕಾರ್ಯಾಲಯ ಇಲಾಖೆಯ ಮುಖ್ಯಸ್ಥರು ರಾಜ್ಯ ಸರಕಾರದ ಎಲ್ಲಾ ಸ್ಥಳೀಯ ಕಚೇರಿಗಳೊಂದಿಗೆ ತಮ್ಮ ಪತ್ರ ವ್ಯವಹಾರವನ್ನು ತಮ್ಮ ಮಾತೃಭಾಷೆಯಲ್ಲೇ (ಕನ್ನಡ, ತಮಿಳು) ನಡೆಸಬಹುದು ಎಂದಿದೆ. ಸೆಕ್ಷನ್ 9ರ ಪ್ರಕಾರ ಜಿಲ್ಲಾ ನ್ಯಾಯಾಲಯದ ಆದೇಶಗಳು ಮತ್ತು ತೀರ್ಪುಗಳು ಮಲೆಯಾಳಂನಲ್ಲಿ ಪ್ರಕಟಿಸಬೇಕು. ಆದರೆ ಅಲ್ಪಸಂಖ್ಯಾತರ ಪ್ರದೇಶದ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಅಥವಾ ಮಲೆಯಾಳಂನಲ್ಲಿ ತೀರ್ಪು ನೀಡಬೇಕು. ಜಾಹೀರಾತು ಬೋರ್ಡ್‌ಗಳನ್ನು ಕನ್ನಡ, ಮಲೆಯಾಳಂನಲ್ಲಿ ಪ್ರದರ್ಶಿಸಬಹುದು. ಮೊದಲಾದ ವ್ಯವಸ್ಥೆಗಳಿರುವಾಗ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡರು ಕಾಸರಗೋಡಿನ ಕನ್ನಡಿಗರನ್ನು ವಂಚಿಸುವುದು ಸರಿಯಲ್ಲವೆಂದು, ಭಾಷೆಯ ಹೆಸರಲ್ಲಿ ಗಲಭೆ ಎಬ್ಬಿಸುವ ಹುನ್ನಾರವನ್ನು ನಿಲ್ಲಿಸಬೇಕೆಂದು ಜಯಾನಂದ ಆಗ್ರಹಿಸಿದ್ದಾರೆ.







