ಕೊಚ್ಚಿ: ನೆಡುಂಬಾಶೇರಿಯಲ್ಲಿ ಕಸ್ಟಮ್ಸ್ ಭಾರೀ ಪ್ರಮಾಣದಲ್ಲಿ ಮಾದಕಪದಾರ್ಥ ವಶಪಡಿಸಿದೆ. ಆರೂವರೆ ಕೋಟಿ ರೂ.ಗಳ ಹೈಬ್ರೀಡ್ ಗಾಂಜಾದೊಂದಿಗೆ ಯುವಕ ಸೆರೆಯಾಗಿದ್ದಾನೆ. ವಯನಾಡ್ ನಿವಾಸಿ ಅಬ್ದುಲ್ ಸಮದ್ ಸೆರೆಯಾದ ವ್ಯಕ್ತಿ. ಇಂದು ಮುಂಜಾನೆ ತಲುಪಿದ ವಿಮಾನದಿಂದ ಕಸ್ಟಮ್ಸ್ ಈತನನ್ನು ಸೆರೆ ಹಿಡಿದಿದೆ. ನೆಡುಂಬಾಶೇರಿ ವಿಮಾನ ನಿಲ್ದಾಣದಿಂದ ಹೊರಗಿಳಿಯುವ ವೇಳೆ ಶಂಕೆ ತೋರಿದ ಕಸ್ಟಮ್ಸ್ ಈತನ ಬ್ಯಾಗನ್ನು ತಪಾಸಣೆಗೊಳಪಡಿಸಿದಾಗ ಬ್ಯಾಗ್‌ನಲ್ಲಿ ಸಣ್ಣ ಪ್ಯಾಕೆಟ್‌ಗಳಾಗಿ ಆರೂವರೆ ಕಿಲೋ ಗಾಂಜಾ ಪತ್ತೆಯಾಗಿದೆ. ಆರೂವರೆ ಕೋಟಿ ರೂ. ಇದರ ಮೌಲ್ಯವೆಂದು ಲೆಕ್ಕಹಾಕಲಾಗಿದೆ.
ವಿಯೆಟ್ನಂನಿಂದ ಬ್ಯಾಂಕಾಕ್‌ಗೆ ತಲುಪಿಸಿದ ಬಳಿಕ ಅಲ್ಲಿಂದ ಸಮದ್ ಗಾಂಜಾ ಸಾಗಿಸಿದ್ದಾನೆ. ವಿಮಾನ ನಿಲ್ದಾಣದಲ್ಲಿ ಈತನ ವಿಚಾರಣೆ ನಡೆಸಲಾಗುತ್ತಿದೆ. ಮಾದಕ ಪದಾರ್ಥ ಸಾಗಾಟಕ್ಕೆ ಕೂಲಿಯಾಗಿ 50,000 ರೂ. ಲಭಿಸಿದೆ ಎಂದು ಯುವಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ರಾಜ್ಯದಲ್ಲಿ ಇತ್ತೀಚೆಗೆ ನಡೆಸಿದ ಅತ್ಯಂತ ದೊಡ್ಡ ಹೈಬ್ರೀಡ್ ಗಾಂಜಾ ಬೇಟೆಯಾಗಿದೆ ಇದು.







