ಕಾಸರಗೋಡು: ಹಿರಿಯ ವಿದ್ಯಾರ್ಥಿಗಳ ಹಲ್ಲೆಯಿಂದ ಕಿರಿಯ ವಿದ್ಯಾರ್ಥಿಗಳಿಗೆ ಗಾಯಗೊಳ್ಳುತ್ತಿರುವ ಘಟನೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಿಸಿದ್ದ ಬೆನ್ನಲ್ಲೇ ಪರವನಡ್ಕದಲ್ಲೂ ಇದೇ ರೀತಿಯ ಅಕ್ರಮ ಸಂಭವಿಸಿದೆ. ಪರವನಡ್ಕದಲ್ಲಿ ಕಾರ್ಯಾಚರಿಸುವ ಚೆಮ್ಮನಾಡ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾದ ಕೋಳಿಯಡ್ಕ ನಿವಾಸಿ 15ರ ಬಾಲಕನಿಗೆ ಆಕ್ರಮಿಸಲಾಗಿದೆ. ಮಂಗಳವಾರ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳಲೆಂದು ಬಸ್ ನಿಲ್ದಾಣಕ್ಕೆ ತಲುಪಿದಾಗ ಹಿರಿಯ ವಿದ್ಯಾರ್ಥಿಗಳ ತಂಡವೊಂದು ಆಕ್ರಮಿಸಿರುವುದಾಗಿ ವಿದ್ಯಾರ್ಥಿಯ ಸಹೋದರ ತಿಳಿಸಿದ್ದಾರೆ. ಕಣ್ಣು ಹಾಗೂ ಮುಖಕ್ಕೆ ಗಾಯಗೊಂಡ ವಿದ್ಯಾರ್ಥಿಯನ್ನು ಅಧ್ಯಾಪಕರು ಜನರಲ್ ಆಸ್ಪತ್ರೆಗೆ ತಲುಪಿಸಿದ್ದರು. ತಲೆಗೆ ಹಾಗೂ ಕಣ್ಣಿಗೆ ಗಂಭೀರ ಗಾಯವಿರುವ ಈತನನ್ನು ನಿನ್ನೆ ಮಧ್ಯಾಹ್ನ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ನಡೆಸಲಾಗಿದೆ.
ಈ ಶೈಕ್ಷಣಿಕ ವರ್ಷ ಆರಂಭಗೊಂಡ ಬಳಿಕ ಜಿಲ್ಲೆಯಲ್ಲಿ ಸೀನಿಯರ್ ವಿದ್ಯಾರ್ಥಿಗಳ ಅಕ್ರಮಕ್ಕೆ ಸಂಬಂಧಿಸಿ ಎರಡು ಡಜನ್‌ಗೂ ಅಧಿಕ ಕೇಸುಗಳನ್ನು ವಿವಿಧ ಠಾಣೆಗಳಲ್ಲಿ ಪೊಲೀಸರು ದಾಖಲಿಸಿದ್ದಾರೆ. ಸೀನಿಯರ್- ಜ್ಯೂನಿಯರ್ ವಿದ್ಯಾರ್ಥಿಗಳ ಮಧ್ಯೆ ಇರುವ ವಿವಾದ, ಅಕ್ರಮ ಮುಂದುವರಿಯುತ್ತಿರುವುದು ಹೆತ್ತವರು, ಶಾಲಾ ಅಧಿಕಾರಿಗಳನ್ನು ಆತಂಕಕ್ಕೀಡುಮಾಡಿದೆ. ಕಳನಾಡು ಹೈದ್ರೋಸ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ವನ್ ವಿದ್ಯಾರ್ಥಿ ಹಲ್ಲೆಗೀಡಾದ ಘಟನೆಯಲ್ಲಿ 8ರಷ್ಟು ಮಂದಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕೋಟಿಕುಳಂ ನಿವಾಸಿಯ ದೂರಿನಂತೆ ಈ ಕೇಸು ದಾಖ ಲಿಸಲಾಗಿದೆ. ಜಿಎಚ್‌ಎಸ್ ಆದೂರಿನ ವಿದ್ಯಾರ್ಥಿ ಹಾಗೂ ನೆಲ್ಲಿಕಟ್ಟೆ ಬಿಲಾಲ್ ನಗರ ನಿವಾಸಿಯಾದ 16ರ ಹರೆಯದ ಬಾಲಕನ ದೂರಿನಂತೆ ಆದೂರು ಪೊಲೀಸರು, ಅಣಂಗೂರು ಮೆಹಬೂಬ್ ರಸ್ತೆ ನಿವಾಸಿ ಹಾಗೂ ತಳಂಗರೆ ಜಿ.ಎಂ.ವಿ.ಎಚ್. ಎಸ್.ಎಸ್.ನ ವಿದ್ಯಾರ್ಥಿಯಾದ ೧೫ರ ಹರೆಯದ ಬಾಲಕನ ದೂರಿನಂತೆ ಕಾಸರಗೋಡು ಪೊಲೀಸರು ಇತ್ತೀಚೆಗೆ ಕೇಸು ದಾಖಲಿಸಿದ್ದಾರೆ.