ಕಾಸರಗೋಡು: ಆಸಿಡ್ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ನಾಲ್ಕನೇ ವ್ಯಕ್ತಿಯೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅಂಬಲತ್ತರ ಪರಕ್ಕಳಾಯಿ ಒಂಡಂಪುಳಕ್ಕಾಲ್ ನಿವಾಸಿ ಗೋಪಿ ಎಂಬವರ ಪುತ್ರ ರಾಖೇಶ್ (27) ಸಾವನ್ನಪ್ಪಿದ ಯುವಕ. ಆಸಿಡ್ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅದು ಫಲಕಾರಿಯಾಗದೆ ಅವರು ಸಾವಿಗೀಡಾಗಿದ್ದಾರೆ.
ರಾಖೇಶ್‌ರ ತಂದೆ ಕೃಷಿಕರಾಗಿರುವ ಗೋಪಿ (60), ಇವರ ಪತ್ನಿ ಇಂದಿರಾ (57), ಇನ್ನೋರ್ವ ಪುತ್ರ ರಾಜೇಶ್ (34) ಆಗಸ್ಟ್ 28ರಂದು ಮುಂಜಾನೆ ಅವರ ಮನೆಯೊಳಗೆ ಆಸಿಡ್ ಸೇವಿಸಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ವೇಳೆ ರಾಖೇಶ್ ಕೂಡಾ ಆಸಿಡ್ ಸೇವಿಸಿ ಗಂಭೀರಾವಸ್ಥೆಯಲ್ಲಿ ಮನೆಯೊಳಗೆ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವಿಗೆ ಶರಣಾಗಿದ್ದಾರೆ.
ಸಾವನ್ನಪ್ಪಿದ ಸಹೋದರರಾದ ರಾಖೇಶ್ ಮತ್ತು ರಾಜೇಶ್ ಈ ಹಿಂದೆ ದುಬೈಯಲ್ಲಿ ದುಡಿಯುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರು ಅಲ್ಲಿಂದ ಊರಿಗೆ ಹಿಂತಿರುಗಿ ಜೀನಸು ವ್ಯಾಪಾರದಲ್ಲಿ ತೊಡಗಿದ್ದರು. ಆರ್ಥಿಕ ಬಿಕ್ಕಟ್ಟೇ ಸಾಮೂಹಿಕ ಆತ್ಮಹತ್ಯೆಗೆ ಕಾರಣವೆನ್ನಲಾಗುತ್ತಿದೆ.