ಜೈಲಿಗೂ ಮಾದಕ ದ್ರವ್ಯ ಪೂರೈಸುವ ತಂಡ ರಾಜ್ಯದಲ್ಲಿ ಸಕ್ರಿಯ: ಓರ್ವ ಸೆರೆ; ಇಬ್ಬರು ಪರಾರಿ

ಕಾಸರಗೋಡು: ರಾಜ್ಯದಲ್ಲಿ ಜೈಲುಗಳಿಗೂ ಮಾದಕದ್ರವ್ಯ ಪೂರೈಸುವ ತಂಡ ಸಕ್ರಿಯವಾಗಿ ಕಾರ್ಯವೆಸಗುತ್ತಿದೆ. ಹೀಗೆ ಕಣ್ಣೂರು ಸೆಂಟ್ರಲ್ ಜೈಲಿಗೆ ಮಾದಕ ದ್ರವ್ಯ ಪೂರೈಸುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಪುದಿಯಪೆರು ಪನಯಂಕಾವು ಕೂಂಬನ್ ಹೌಸಿನ ಕೆ.ಅಕ್ಷಯ್ (27) ಬಂಧಿತ ವ್ಯಕ್ತಿ. ಆತನ ಜೊತೆಗಿದ್ದ ಇದೇ ತಂಡದ ಇಬ್ಬರು  ಆ ವೇಳೆ ಪರಾರಿಯಾಗಿದ್ದಾರೆ.

ಜೈಲಿನಲ್ಲಿ ಕಳೆಯುತ್ತಿರುವ ಖೈದಿಗಳಿಗೆ ಮಾದಕ ದ್ರವ್ಯ, ಮೊಬೈಲ್ ಫೋನ್, ಬೀಡಿ, ಸಿಗರೇಟ್ ಇತ್ಯಾದಿಗಳನ್ನು ಪೂರೈಸುವ ತಂಡವಾಗಿದೆ ಇದು. ಮಾದಕದ್ರವ್ಯ ವ್ಯಸನಿಗಳಾದ ಖೈದಿಗಳು ಮಾದಕ ದ್ರವ್ಯದ ಅಗತ್ಯವಿದ್ದಲ್ಲಿ ಅದನ್ನು ತಿಳಿಸಲು ಈ ತಂಡದವರು ಮೊದಲು ಅಂತಹ ಖೈದಿಗಳಿಗೆ ಜೈಲಿನ ಹೊರಗಡೆಯ ಗೋಡೆಯಿಂದ ಮೊಬೈಲ್ ಎಸೆದು ನೀಡುತ್ತಾರೆ. ಆ ಮೊಬೈಲ್ ಫೋನ್ ಮೂಲಕ ಖೈದಿಗಳು ತಮಗೆ ಅಗತ್ಯವಿರುವ ಗಾಂಜಾ ಇತ್ಯಾದಿ ಮಾದಕ ದ್ರವ್ಯದ ಬಗ್ಗೆ ಈ ತಂಡದ ವರಿಗೆ ಆರ್ಡರ್ ಮಾಡುತ್ತಾರೆ. ಅದರಂತೆ ಈ ತಂಡದವರು ಮಾದಕ ದ್ರವ್ಯದೊಂದಿಗೆ ಜೈಲಿನ ಹಿಂದಿನ ಗೋಡೆ ಭಾಗಕ್ಕೆ ಬಂದು ನಿಲ್ಲುವ ವೇಳೆ ಅವರು ಮೊಬೈಲ್ ಮೂಲಕ ಖೈದಿಗಳಿಗೆ ಸಿಗ್ನಲ್ ನೀಡುತ್ತಾರೆ. ಆಗ ಜೈಲಿನೊಳಗಿಂದ ಖೈದಿಗಳಿಂದಲೂ ಸಿಗ್ನಲ್ ಲಭಿಸುತ್ತದೆ. ಆಗ ಈ ತಂಡದವರು ಜೈಲಿನ ಗೋಡೆ ಮೂಲಕ ಮಾದಕದ್ರವ್ಯದ ಪೊಟ್ಟಣವನ್ನು ಜೈಲಿನೊಳಗೆ ಎಸೆಯುತ್ತಾರೆ. ಇದಕ್ಕಾಗಿ ಈ ತಂಡದವರಿಗೆ ಖೈದಿಗಳಿಂದ ಹಣವೂ ಲಭಿಸುತ್ತದೆ. ಇಂತಹ ಮಾದಕ ದ್ರವ್ಯ ದಂಧೆಯ ಹಿಂದೆ ಭಾರೀ ದೊಡ್ಡ ಗ್ಯಾಂಗ್ ಇದೆ ಎಂದೂ ಪೊಲೀಸರು ಸಂಶಯಿಸತೊಡಗಿದ್ದಾರೆ.ಮಾತ್ರವಲ್ಲ ಜೈಲಿನಲ್ಲಿ ಕಳೆಯುತ್ತಿರುವ ಖೈದಿಗಳ ಪೈಕಿ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಅದೆಷ್ಟೋ ಮಂದಿ ಇದ್ದು, ಅವರಿಗೂ ಈ ತಂಡದವರು ಗುಪ್ತವಾಗಿ ಮೊಬೈಲ್ ತಲುಪಿಸಿ ಅದನ್ನು ಉಪಯೋಗಿಸಿ ಅಂತಹ ಖೈದಿಗಳು ಜೈಲಿನೊಳಗೇ ಕುಳಿತು ಹೊರಗಡೆ ತಮ್ಮ ದಂಧೆಯನ್ನು ಮುಂದುವರಿಸುತ್ತಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.

You cannot copy contents of this page