ಕಾಸರಗೋಡು: ವಿಜ್ಞಾನ ತಾಂತ್ರಿಕ ಅಧ್ಯಯನ ವಲಯದಲ್ಲಿ ಉತ್ತಮ ಕೊಡುಗೆಗಳನ್ನು ನೀಡುವ ಕೇರಳೀಯ ವಿಜ್ಞಾನಿಗಳಿಗಿರುವ ಸ್ವದೇಶಿ ಶಾಸ್ತ್ರ ಪುರಸ್ಕಾರವನ್ನು ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನೋ ಲಜಿಯ ಮಾಜಿ ನಿರ್ದೇಶಕ ಡಾ. ಚಂದ್ರಭಾಸ್ ನಾರಾಯಣ, ಇಂಡ್ಯನ್ ನ್ಯಾಶನಲ್ ಸೆಂಟರ್ ಫಾರ್ ಓಷ್ಯನ್ ಇನ್‌ಫರ್ಮೇಶನ್ ಸರ್ವೀಸ್ ನಿರ್ದೇಶಕ ಡಾ. ಟಿ.ಎಂ. ಬಾಲಕೃಷ್ಣನ್ ನಾಯರ್ ಎಂಬಿವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಖರ್ ಪ್ರದಾನ ಮಾಡಿದರು.
ಕಂಡೆನ್ಸ್‌ಡ್ ಫಿಸಿಕ್ಸ್, ಭೌತಿಕ- ಜೈವಿಕ ವಿಜ್ಞಾನ ಶಾಖೆಯ ಸಮನ್ವಯಕ್ಕೆ ಆದ್ಯತೆ ನೀಡಿದ ಅಧ್ಯಯನ ಚಟುವಟಿಕೆಗಳು, ಸ್ವದೇಶಿಯತೆಯನ್ನು ಸೇರಿಸಿಕೊಂಡು ಭಾರತದಲ್ಲಿಯೇ ಆಧುನಿಕ ಹಾಗೂ ವಿಶ್ವ ಮಟ್ಟದ ವಿಜ್ಞಾನ ಉಪಕರಣಗಳಿಗೆ ರೂಪು ನೀಡಿ ನಿರ್ಮಿಸಿರುವುದು ಡಾ. ಚಂದ್ರಭಾಸ್ ನಾರಾಯಣರ ಗಮನಾರ್ಹವಾದ ಕೊಡುಗೆಯಾಗಿದೆ. ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ ಯನ್ನು ವಿಶ್ವೋತ್ತರ ವಿಜ್ಞಾನ ಅಧ್ಯಯನ ಸಂಸ್ಥೆಯನ್ನಾಗಿ ಬದಲಿಸುವುದರಲ್ಲಿ ನೇತೃತ್ವ ನೀಡಿರುವ ಹಿನ್ನೆಲೆಯಲ್ಲಿ ಈ ಪುರಸ್ಕಾರ ಪ್ರದಾನ ಮಾಡಲಾಗಿದೆ. ಸಮುದ್ರ ನಿರೀಕ್ಷಣೆ, ಶೃಂಖಲೆಗಳ ರೂಪು ಕಲ್ಪನೆ ಮಾಡಿ ಅಭಿವೃದ್ಧಿಗೊಳಿಸಿದ ಹಿನ್ನೆಲೆಯಲ್ಲಿ ಡಾ. ಟಿ.ಎಂ. ಬಾಲಕೃಷ್ಣನ್ ನಾಯರ್‌ರ ಸೇವೆಯನ್ನು ಪರಿಗಣಿಸಿ ಅವರಿಗೂ ಪುರಸ್ಕಾರ ನೀಡಲಾಗಿದೆ. ಕೊಚ್ಚಿ ವಿಜ್ಞಾನ ತಾಂತ್ರಿಕ ವಿ.ವಿ.ಯ ವಿಸಿಟಿಂಗ್ ಪ್ರೊಫೆಸರ್ ಡಾ. ಪಿ.ವಿ.ಎನ್. ನಂಬೂದಿರಿಯವರಿಗೆ ಸ್ವದೇಶಿ ಪುರಸ್ಕಾರವನ್ನು ಇದೇ ವೇಳೆ ಪ್ರದಾನ ಮಾಡಲಾಗಿದೆ.







