ಸಚಿವರು ಉದ್ಘಾಟಿಸಿ ಮರಳಿದ ಬೆನ್ನಲ್ಲೇ ಮುಚ್ಚುಗಡೆಗೊಂಡ ಕುಂಬಳೆ ಪಂ.ನ ‘ಟೇಕ್ ಎ ಬ್ರೇಕ್’ ಕಟ್ಟಡ

ಕುಂಬಳೆ: ಸಾರ್ವಜನಿಕರ ಉಪಯೋಗಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ನಿರ್ಮಿಸಿದ ಶೌಚಾಲಯ ಸಹಿತ ವಿಶ್ರಾಂತಿ ಕೇಂದ್ರ (ಟೇಕ್ ಎ ಬ್ರೇಕ್) ಉದ್ಘಾಟನೆಗೊಂಡು ಒಂದೇ ತಿಂಗಳಲ್ಲಿ ಮುಚ್ಚುಗಡೆಗೊಂಡಿದೆ.  ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ 40 ಲಕ್ಷ ರೂ. ವ್ಯಯಿಸಿ ಈ ವಿಶ್ರಾಂತಿ ಕೇಂದ್ರವನ್ನು ನಿರ್ಮಿಸಲಾಗಿತ್ತು. ಕಳೆದ ಅಗೋಸ್ತ್ ೧೪ರಂದು ಇದರ ಉದ್ಘಾ ಟನೆಯನ್ನು ರಾಜ್ಯ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ.ಶಾಜಿ ಉದ್ಘಾಟಿಸಿದ್ದರು. ಉದ್ಘಾಟನೆ ಬಳಿಕ ಒಂದು ತಿಂಗಳು ಮಾತ್ರವೇ ಇದು ಕಾರ್ಯಾಚರಿಸಿದೆ.  ಅನಂತರ  ಇದು ಮುಚ್ಚುಗಡೆಗೊಂಡ ಸ್ಥಿತಿಯಲ್ಲಿದೆ. ಇಲ್ಲಿಗೆ ನೀರಿನ ಸೌಕರ್ಯವಿಲ್ಲದಿ ರುವುದೇ ಈ ವಿಶ್ರಾಂತಿ ಕೇಂದ್ರ ಮುಚ್ಚುಗಡೆಗೊಳ್ಳಲು ಕಾರಣವೆಂದು ಹೇಳಲಾಗುತ್ತಿದೆ. ಉದ್ಘಾಟನೆ ಬಳಿಕ ಒಂದು ತಿಂಗಳ ಕಾಲ ಕುಂಬಳೆ ಪೈ  ಕಂಪೌಂಡ್ ನಿವಾಸಿಗಳಿಗೆ ವಿತರಿಸುವ ರಾಜೀವಗಾಂಧಿ ಕುಡಿಯುವ ನೀರು ಯೋಜನೆಯಿಂದ ಇಲ್ಲಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಅಲ್ಲಿನ  ನಿವಾಸಿಗಳಿಗೆ  ನೀರು ಸಾಕಾಗದೆ ಇದ್ದುದರಿಂದ  ವಿಶ್ರಾಂತಿ ಕೇಂದ್ರಕ್ಕೆ ನೀರು ಸರಬರಾಜು ಮೊಟಕುಗೊಂಡಿದೆ. ಇದರಿಂದ ಇದನ್ನು  ತೆರೆಯಲು ಸಾಧ್ಯವಾಗಲಿಲ್ಲವೆಂದು ಹೇಳಲಾಗುತ್ತಿದೆ. 

40 ಲಕ್ಷ ರೂಪಾಯಿ ಖರ್ಚುಮಾಡಿ ವಿಶ್ರಾಂತಿ ಕೇಂದ್ರ ಕಟ್ಟಡ ನಿರ್ಮಿಸಿದ ಪಂಚಾಯತ್‌ಗೆ  ಒಂದು ಕೊಳವೆ ಬಾವಿ ತೋಡಿ ನೀರಿನ ಸೌಕರ್ಯ ಒದಗಿಸಲು ಸಾಧ್ಯವಾಗಿ ಲ್ಲವೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.   ಈ ವಿಶ್ರಾಂತಿ ಕೇಂದ್ರದ ಉದ್ಘಾಟನೆ ನಿರ್ವಹಿಸಿದ ಸಚಿವ ಕೆ.ಎಂ. ಶಾಜಿಯವರು ಮಾತನಾಡಿ, “ಸರಕಾರದ ಹಣವನ್ನು ಉಪಯೋಗಿಸಿ ಎಷ್ಟು ಕಟ್ಟಡ ಬೇಕಾದರೂ ನಿರ್ಮಿಸಬಹುದು. ಆದರೆ ಅದನ್ನು ಸರಿಯಾದ ರೀತಿಯಲ್ಲಿ  ಉಪಯೋಗಿಸಲು ಸಾಧ್ಯವಾದರೆ ಮಾತ್ರವೇ ಕಟ್ಟಡ ನಿರ್ಮಿಸಿದರೆ ಸಾಕು. ಇಲ್ಲದಿದ್ದಲ್ಲಿ ಸಾರ್ವಜನಿಕರ ಹಣವನ್ನು

ಖರ್ಚುಮಾಡಿ ಕಟ್ಟಡ ನಿರ್ಮಿಸುವ ಅಗತ್ಯವಿಲ್ಲ”ವೆಂದು  ತಿಳಿಸಿದ್ದರು.  ಆದರೆ ಇದೀಗ  ಸಚಿವರ  ಹೇಳಿಕೆಗೆ ವಿರುದ್ಧವಾಗಿ  ಕಟ್ಟಡ  ಉಪಯೋಗಶೂನ್ಯವಾಗಿ ಉಳಿದುಕೊಂಡಿದೆ. ಕಟ್ಟಡದ  ಇದೀಗಿನ ಸ್ಥಿತಿಯನ್ನು ವಿವರಿಸಿ ನಾಗರಿಕರು ಸಚಿವರಿಗೆ ಮನವಿ ಸಲ್ಲಿಸುವ ಸಿದ್ಧತೆಯಲ್ಲಿದ್ದಾರೆ.

RELATED NEWS

You cannot copy contents of this page