ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿ ನಿನ್ನೆ ಸಂಭವಿಸಿದ ಬಸ್ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಹಿತ ಆರು ಮಂದಿ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.
ನಿನ್ನೆ ಮಧ್ಯಾಹ್ನ 1.45 ರ ವೇಳೆ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಈ ಭೀಕರ ಅಪಘಾತವುಂಟಾಗಿದೆ.
ಆಟೋ ರಿಕ್ಷಾ ಚಾಲಕ ಕೋಟೆಕಾರು ಬಳಿಯ ಅಜ್ಜಿನಡ್ಕ ಮುಳ್ಳುಗದ್ದೆ ನಿವಾಸಿ ಹೈದರ್ ಅಲಿ (47), ಪ್ರಯಾಣಿಕರಾದ ಅಜ್ಜಿನಡ್ಕದ ಖದೀಜ (60), ನೆಬೀಸ (52), ನೆಬೀಸರ ಅತ್ತೆ ಪರಂಗಿಪೇಟೆ ಪರಾರಿ ನಿವಾಸಿ ಅವ್ವಮ್ಮ (70), ನೆಬೀಸರ ಪುತ್ರಿ ಆಯಿಶ ಫಿದ (19), ಸಹೋದರನ ಮಗಳು ಹಸ್ನ (13) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಕಾಸರಗೋಡು ಪೆರುಂಬಳ ನಿವಾಸಿಗಳಾದ ಲಕ್ಷ್ಮಿ (61), ಪುತ್ರ ಸುರೇಂದ್ರನ್ (39) ಎಂಬಿವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಟೋ ರಿಕ್ಷಾದಲ್ಲಿದ್ದವರು ಅಜ್ಜಿನಡ್ಕದಿಂದ ಕುಂಜತ್ತೂರು ಭಾಗದಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಿ ದ್ದರೆನ್ನಲಾಗಿದೆ.
ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಹೆದ್ದಾರಿ ಮೂಲಕ ಸಂಚರಿಸುತ್ತಿತ್ತು. ಈ ವೇಳೆ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಬಸ್ ಢಿಕ್ಕಿ ಹೊಡೆದಿದೆ. ಅನಂತರ ನಿಯಂತ್ರಣ ತಪ್ಪಿದ ಬಸ್ ಹಿಮ್ಮುಖವಾಗಿ ಸಂಚರಿಸಿ ರಸ್ತೆ ಬದಿ ನಿಂತಿದ್ದ ವ್ಯಕ್ತಿಗಳಿಗೆ ಹಾಗೂ ಬೇರೊಂದು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದು ನಿಂತಿದೆ.
ಬಸ್ ಮೊದಲು ಢಿಕ್ಕಿ ಹೊಡೆದ ಆಟೋ ರಿಕ್ಷಾ ನಜ್ಜುಗುಜ್ಜಾಗಿದ್ದು, ಇದರಿಂದ ಅದರಲ್ಲಿದ್ದ ಚಾಲಕ ಸಹಿತ ಆರು ಮಂದಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ರಿಕ್ಷಾಕ್ಕೆ ಢಿಕ್ಕಿ ಹೊಡೆದು ಬಳಿಕ ಹಿಮ್ಮುಖವಾಗಿ ಸಂಚರಿಸಿದ ಬಸ್ ರಸ್ತೆ ಬದಿ ನಿಂತಿದ್ದವರಿಗೂ ಢಿಕ್ಕಿ ಹೊಡೆದಿದೆ. ಇದರಿಂದ ಲಕ್ಷ್ಮಿ ಹಾಗೂ ಸುರೇಂದ್ರನ್ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಆರು ಮಂದಿಯ ಮೃತದೇಹಗಳನ್ನು ದೇರಳಕಟ್ಟೆ ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.
ಅಪಘಾತ ಸಂಭವಿಸಿದ ವಿಷಯ ತಿಳಿದು ಶಾಸಕರಾದ ಎಕೆಎಂ ಅಶ್ರಫ್, ಎನ್.ಎ. ನೆಲ್ಲಿಕುನ್ನು, ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು. ಅಪಘಾತಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡು ಬಸ್ ಹಾಗೂ ಚಾಲಕನನ್ನು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ.
ಭಾರೀ ಅಪಾಯದಿಂದ ಪಾರಾದ ಕಾಸರಗೋಡು ನಿವಾಸಿ ತಾಯಿ, ಪುತ್ರ
ಮಂಜೇಶ್ವರ: ತಲಪಾಡಿಯಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಭೀಕರ ಬಸ್ ಅಪಘಾತ ವೇಳೆ ಕಾಸರಗೋಡು ನಿವಾಸಿಗಳಾದ ತಾಯಿ ಹಾಗೂ ಪುತ್ರ ಭಾರೀ ಅಪಾಯದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.
ಕಾಸರಗೋಡು ಪೆರುಂಬಳದಲ್ಲಿ ವಾಸಿಸುವ ಲಕ್ಷ್ಮಿ (61) ಹಾಗೂ ಪುತ್ರ ಸುರೇಂದ್ರನ್ (39) ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಲಕ್ಷ್ಮಿ ಹಾಗೂ ಸುರೇಂದ್ರನ್ ಮೂಲತಃ ಕುಂಜತ್ತೂರು ತೂಮಿನಾಡು ನಿವಾಸಿಗಳಾಗಿದ್ದಾರೆ. ಇವರು ಈಗ ಪೆರುಂಬಳದಲ್ಲಿ ವಾಸವಾಗಿದ್ದಾರೆ. ಲಕ್ಷ್ಮಿಯವರ ಪಿಂಚಣಿ ತಲಪಾಡಿಯ ಬ್ಯಾಂಕೊಂದಕ್ಕೆ ಬಂದಿತ್ತು. ಅದನ್ನು ಪಡೆಯಲೆಂದು ನಿನ್ನೆ ಪುತ್ರನೊಂದಿಗೆ ತಲಪಾಡಿಗೆ ತೆರಳಿದ್ದರು. ಬ್ಯಾಂಕ್‌ನಿಂದ ಪಿಂಚಣಿ ಮೊತ್ತ ಪಡೆದು ಬಳಿಕ ಕಾಸರಗೋಡಿಗೆ ಮರಳಲು ರಸ್ತೆ ಬದಿ ಬಸ್‌ಗಾಗಿ ಕಾದು ನಿಂತಿದ್ದರು. ಈ ವೇಳೆ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಬಳಿಕ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಸಂಚರಿಸಿ ಬಸ್‌ಗಾಗಿ ಕಾದು ನಿಂತಿದ್ದ ಲಕ್ಷ್ಮಿ ಹಾಗೂ ಸುರೇಂದ್ರನ್‌ರಿಗೆ ಢಿಕ್ಕಿ ಹೊಡೆದಿದೆ.