ಪುತ್ತೂರು: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಕಸ್ಟಡಿಗೆ ತೆಗೆಯಲು ಉಡುಪಿ ಜಿಲ್ಲಾ ಪೊಲೀಸರ ತಂಡ ಇಂದು ಬೆಳಿಗ್ಗೆ ಬೆಳ್ತಂಗಡಿಗೆ ಆಗಮಿಸಿದೆ. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವರ ನೇತೃತ್ವದಲ್ಲಿ ವಿವಿಧ ಗ್ರಾಮಾಂತರ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಒಳಗೊಂಡ ತಂಡ ಆರು ಜೀಪುಗಳಲ್ಲಾಗಿ ಬೆಳ್ತಂಗಡಿಗೆ ತಲುಪಿದೆ. ಏಕಾಏಕಿ ನಡೆದ ಈ ಪೊಲೀಸ್ ಕಾರ್ಯಾಚರಣೆಯಿಂದ ಸ್ಥಳೀಯರಲ್ಲಿ ಕುತೂಹಲ ಸೃಷ್ಟಿಯಾಗಿದೆ. ಉಡುಪಿ ಜಿಲ್ಲಾ ಅಡಿಶನಲ್ ಎಸ್‌ಪಿ ಸುಧಾಕರ್ ಹೆಗ್ಡೆ ನೇತೃತ್ವದಲ್ಲಿ ತಿಮರೋಡಿಯನ್ನು ಕಸ್ಟಡಿಗೆ ತೆಗೆಯಲಾಗಿದೆ.
ಈ ತಿಂಗಳ 16ರಂದು ಫೇಸ್‌ಬುಕ್ ಪೇಜ್‌ನಲ್ಲಿ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ರ ಬಗ್ಗೆ ಅವಾಚ್ಯವಾಗಿ ನಿಂದಿಸಿ ಅವಹೇಳನ ಮಾಡಿ ಧರ್ಮಗಳ ಮಧ್ಯೆ ವೈಮನಸ್ಸು ಉಂಟುಮಾಡಲು ಶ್ರಮಿಸಿದ್ದಾರೆ ಎಂದು ದೂರು ನೀಡಲಾಗಿತ್ತು. ತಿಮರೋಡಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಬೆಳ್ತಂಗಡಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.