ಹೈದರಾಬಾದ್: ಆಂಧ್ರಪ್ರದೇಶದ ಕುರ್ನೂಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ಗೆ ಬೆಂಕಿ ತಗಲಿ 32 ಮಂದಿ ಪ್ರಯಾಣಿಕರು ಸಜೀವ ದಹನಗೊಂಡು ಇನ್ನೂ ಹಲವರು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ಆಂಧ್ರಪ್ರದೇಶದ ಕುರ್ನೂಲ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-44ರ ಚಿನ್ನತೇಕೂರು ಗ್ರಾಮದಲ್ಲಿ ಇಂದು ಮುಂಜಾನೆ 3.30ರ ವೇಳೆ ಈ ದುರ್ಘಟನೆ ಉಂಟಾಗಿದೆ. ಬೆಂಕಿ ತಗಲಿದ ಬಸ್ಸಿನಲ್ಲಿ ೪೦ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬಸ್ ಬೆಂಗಳೂರಿಗೆ ಬರುತ್ತಿದ್ದ ವೇಳೆ ಧಾರಾಕಾರ ಮಳೆ ಸುರಿಯುತ್ತಿತ್ತು. ಈ ವೇಳೆ ಶಿವಶಂಕರ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಅಮಿತ ವೇಗದಲ್ಲಿ ಬಂದು ನಿಯಂತ್ರಣ ತಪ್ಪಿ ಬಸ್ಸಿನ ಮುಂಭಾಗದ ಚಕ್ರದಡಿ ಸಿಲುಕಿಕೊಂಡಿತ್ತು. ಅಲ್ಲದೆ ಬಸ್ಸಿನ ಡೀ ಸೆಲ್ ಟ್ಯಾಂಕ್‌ಗೆ ಬೈಕ್ ಢಿಕ್ಕಿ ಹೊಡೆದ ತಕ್ಷಣ ಬೆಂಕಿ ಹತ್ತಿಕೊಂಡಿರುವುದೇ ಈ ದುರಂತಕ್ಕೆ ಕಾರಣವೆಂದು ಕುರ್ನೂಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಹವಾ ನಿಯಂತ್ರಿತ ಬಸ್ಸಿನ ಎಲ್ಲಾ ಕಿಟಿಕಿಗಳನ್ನು ಮುಚ್ಚಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ತಕ್ಷಣ ಹೊರಬರಲು ಸಾಧ್ಯವಾಗಲಿಲ್ಲ. ಅಷ್ಟರೊಳಗೆ ಬೆಂಕಿ ಇಡೀ ಬಸ್ಸನ್ನೇ ಆವರಿಸಿತ್ತು. ಅಗ್ನಿಶಾಮಕದಳ, ಪೊಲೀಸರು ಹಾಗೂ ನಾಗರಿಕರು ನಡೆಸಿದ ಕಾರ್ಯಾ ಚರಣೆಯಲ್ಲಿ ಬಸ್ಸಿನ ಕಿಟಿಕಿ ಹಾಜುಗಳನ್ನು, ತುರ್ತು ನಿರ್ಗಮನ ಬಾಗಿಲನ್ನು ಒಡೆದು ಪ್ರಯಾಣಿಕರನ್ನು ಅತೀ ಸಾಹಸದಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟರೊಳಗೆ 32 ಮಂದಿ ಪ್ರಯಾಣಿಕರ ಪ್ರಾಣ ಪಕ್ಷಿ ಹಾರಿಹೋಗಿತ್ತು. ದುರಂತದ ಬಗ್ಗೆ ದುಬಾಯಿ ಸಂದರ್ಶನದಲ್ಲಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.







