ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಪಂಚಾಯತ್ನಲ್ಲಿ ಆರ್ಥಿಕ ಅವ್ಯವಹಾರದ ವಿಚಾರ ಮುಂದಿಟ್ಟು ಅಧ್ಯಕ್ಷ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲು ಬಿಜೆಪಿಗೆ ನೈತಿಕ ಹಕ್ಕಿಲ್ಲವೆಂದು ಬ್ಲೋಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ತಿಳಿಸಿದ್ದಾರೆ. ಮಂಜೇಶ್ವರ ತಾಲೂಕಿನ ವಿವಿಧ ಭಾಗಗಳಲ್ಲಿ ಧರ್ಮದ ಹೆಸರಲ್ಲಿ ಸರಕಾರಿ ಭೂಮಿಯನ್ನು ಅತಿಕ್ರಮಿಸುತ್ತಿ ರುವ ಬಿಜೆಪಿಗೆ ಬ್ಲೋಕ್ ಪಂಚಾಯತ್ ಕಚೇರಿಯ ಪ್ಲಾನಿಂಗ್ ಕ್ಲರ್ಕ್ ಆರ್ಥಿಕ ಅವ್ಯವಹಾರ ನಡೆಸಿದ ಬಗ್ಗೆ ಮಾತನಾಡಲು ಹಕ್ಕಿಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರಕಾರಿ ಭೂಮಿಯನ್ನು ಅತಿಕ್ರಮಿಸಲು ಸಂಘ ಪರಿವಾರ ವ್ಯವಸ್ಥಿತ ಸಂಚು ರೂಪಿಸುತ್ತಿದ್ದು, ಇದಕ್ಕೆ ಅಧಿಕಾರಿಗಳ ಬೆಂಬಲವೂ ಇದೆ ಎಂಬುದು ವಿಷಾದನೀಯ ಎಂದು ಅವರು ತಿಳಿಸಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಕೇಂದ್ರ ಸರಕಾರ ಮಾತ್ರ ಅನುದಾನ ನೀಡುತ್ತದೆ ಎಂಬ ಬಿಜೆಪಿಯ ಪ್ರಚಾರ ವಾಸ್ತವವಿರುದ್ಧ ವಾಗಿದೆ. 4 ಲಕ್ಷ ರೂಪಾಯಿಗಳ ಮನೆ ನಿರ್ಮಾಣ ಸಹಾಯ ಧನದಲ್ಲಿ ಕೇವಲ 72,೦೦೦ ರೂ. ಮಾತ್ರವೇ ಕೇಂದ್ರ ಸರಕಾರ ನೀಡುತ್ತಿದ್ದು, 48,೦೦೦ ರೂ. ರಾಜ್ಯ ಸರಕಾರ ಹಾಗೂ ೧,೧೨,೦೦೦ ರೂ.ವನ್ನು ಬ್ಲೋಕ್ ಪಂಚಾಯತ್ ನೀಡುತ್ತಿದೆ. ಉಳಿದ ಮೊತ್ತವನ್ನು ಜಿಲ್ಲಾ ಮತ್ತು ಗ್ರಾಮ ಪಂಚಾಯತ್ಗಳ ಪಾಲಿನಿಂದ ಒದಗಿಸಲಾಗುತ್ತದೆ. ಬ್ಲೋಕ್ ಪಂಚಾಯತ್ನ 1,೧2,೦೦೦ ರೂ.ಗಳ ಪಾಲಿನಲ್ಲಿ ಆರ್ಥಿಕ ಅವ್ಯವಹಾರ ನಡೆದಿದೆ. ಈ ಘಟನೆ ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟ ನೌಕರನನ್ನು ಪತ್ತೆಹಚ್ಚಲಾಗಿದ್ದು, ಹಣವನ್ನು ತನನ ಸ್ವಂತ ಖಾತೆಗೆ ವರ್ಗಾಯಿಸಿರುವುದಾಗಿ ಆತ ಲಿಖಿತ ಹೇಳಿಕೆ ನೀಡಿದ್ದಾನೆ. ಬಳಿಕ ಪೊಲೀಸರಿಗೆ ದೂರು ಸಲ್ಲಿಸಿ ಪ್ರಕರಣ ದಾಖಲಿಸಲಾಗಿದ್ದು ಎಫ್ಐಆರ್ ನೋಂದಾಯಿಸಲಾಗಿದೆ.
ಬ್ಲೋಕ್ ಪಂಚಾಯತ್ ಅಧ್ಯಕ್ಷ ನಾಗಿ ಈ ಪ್ರಕರಣದಲ್ಲಿ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನೂ ಸಮರ್ಪಕವಾಗಿ ಕೈಗೊಂಡಿರುವುದಾಗಿ ಸೈಫುಲ್ಲಾ ತಂಙಳ್ ತಿಳಿಸಿದ್ದಾರೆ. ಅಲ್ಲದೆ ಕಚೇರಿ ನೌಕರರ ಕಾರ್ಯಚಟುವಟಿಕೆಗಳಲ್ಲಿ ಆಡಳಿತ ಸಮಿತಿಗೆ ನೇರ ಹಸ್ತಕ್ಷೇಪ ನಡೆಸಲು ಸಾಧ್ಯವಾಗುವುದಿಲ್ಲವೆಂದು ಅವರು ತಿಳಿಸಿದ್ದಾರೆ.
ಸರಕಾರಿ ಭೂಮಿಯನ್ನು ಅತಿಕ್ರಮಿಸುತ್ತಿರುವ ಬಿಜೆಪಿ ಆರ್ಥಿಕ ಅವ್ಯವಹಾರದ ವಿಚಾರ ಮುಂದಿಟ್ಟು ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿರುವುದು ವಿಪರ್ಯಾಸ ಎಂದು ಸೈಫುಲ್ಲಾ ತಂಙಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






